ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮರಳಲು ಕರುಣ್ ನಾಯರ್ ಸಿದ್ಧತೆ

PC | PTI
ಬೆಂಗಳೂರು: ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಟೀಮ್ ಇಂಡಿಯಾದೊಂದಿಗೆ ಇರುವ ಕರುಣ್ ನಾಯರ್ ಮೂರು ವರ್ಷಗಳ ನಂತರ ತವರು ರಾಜ್ಯ ಕರ್ನಾಟಕಕ್ಕೆ ವಾಪಸಾಗಲು ಸಜ್ಜಾಗುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ವಿದರ್ಭ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ನಾಯರ್ ಅವರು ಸೋಮವಾರ ಸಂಜೆ ವಿದರ್ಭ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ಸ್ವೀಕರಿಸಿದ್ದಾರೆ. ನಾಯರ್ಗೆ ತನ್ನ ತವರು ರಾಜ್ಯಕ್ಕೆ ಮರಳಲು ಎನ್ಒಸಿ ಅವಕಾಶ ನೀಡುತ್ತದೆ.
ಸದ್ಯ ಉತ್ತಮ ಫಾರ್ಮ್ನಲ್ಲಿರುವ ನಾಯರ್ ಈ ವರ್ಷ ವಿದರ್ಭ ತಂಡವು 3ನೇ ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ರಣಜಿಯಲ್ಲಿ 53.93ರ ಸರಾಸರಿಯಲ್ಲಿ 4 ಶತಕಗಳ ಸಹಿತ 16 ಇನಿಂಗ್ಸ್ಗಳಲ್ಲಿ 863 ರನ್ ಗಳಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ನಂತರ ನಾಯರ್ ಅವರು ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ.
ನಾಯರ್ 50 ಓವರ್ಗಳ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲೂ ರನ್ ಹೊಳೆ ಹರಿಸಿದ್ದು, ವಿದರ್ಭ 2ನೇ ಸ್ಥಾನ ಪಡೆಯುವಲ್ಲಿ ನೆರವಾದರು. ಈ ಟೂರ್ನಿಯಲ್ಲಿ 8 ಇನಿಂಗ್ಸ್ಗಳಲ್ಲಿ ಸತತ 5 ಶತಕಗಳ ಸಹಿತ ಒಟ್ಟು 779 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯ ವೇಳೆ ಔಟಾಗದೆ ಹೆಚ್ಚು ರನ್ ಗಳಿಸಿ (542)ಲಿಸ್ಟ್ ಎ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು.
ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಲ್ಲಿ ನಾಯರ್ ಈ ತನಕ ದೊಡ್ಡ ಮೊತ್ತ ಗಳಿಸಿಲ್ಲ. ಬೆಕೆನ್ಹ್ಯಾಮ್ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ತಂಡದ ಪರ ದ್ವಿಶತಕ ಗಳಿಸಿದ್ದ ನಾಯರ್ ಈ ತನಕ 3 ಟೆಸ್ಟ್ ಪಂದ್ಯಗಳಲ್ಲಿ 0,20,31, 26, 40 ಹಾಗೂ 14 ರನ್ ಗಳಿಸಿದ್ದಾರೆ.
ಕರ್ನಾಟಕ ತಂಡಕ್ಕೆ ಮರಳುತ್ತಿರುವ ನಾಯರ್ ಅವರು ಪ್ರತಿಭಾವಂತ ಬ್ಯಾಟರ್ಗಳಾದ ಸ್ಮರಣ್, ಕೆ.ಎಲ್.ಶ್ರೀಜಿತ್ ಹಾಗೂ ಕೆ.ವಿ. ಅನೀಶ್ರನ್ನು ಸೇರಿಕೊಳ್ಳಲಿದ್ದಾರೆ. 2024-25ರಲ್ಲಿ ಸ್ಮರಣ್ 10 ರಣಜಿ ಇನಿಂಗ್ಸ್ಗಳಲ್ಲಿ 516 ರನ್ ಗಳಿಸಿದ್ದರು.
ವಿ. ಕೌಶಿಕ್ ಗೋವಾಕ್ಕೆ ಸ್ಥಳಾಂತರ:
ಇದೇ ವೇಳೆ, ವೇಗದ ಬೌಲರ್ ವಿ.ಕೌಶಿಕ್ ಅವರು ಮುಂಬರುವ ಋತುವಿನಲ್ಲಿ ಗೋವಾ ತಂಡದ ಪರ ಆಡಲು ಕರ್ನಾಟಕ ತಂಡದಿಂದ ಎನ್ಒಸಿ ಪಡೆದಿದ್ದಾರೆ.
2019-20ರಲ್ಲಿ ತನ್ನ ಚೊಚ್ಚಲ ರಣಜಿ ಪಂದ್ಯ ಆಡಿದ ಕೌಶಿಕ್ ಅವರು ಆರ್. ವಿನಯ್ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಎಸ್. ಅರವಿಂದ್ ನಿವೃತ್ತಿಯ ನಂತರ ಕರ್ನಾಟಕದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಸದಸ್ಯರಾಗಿದ್ದರು.
2024-25ರ ರಣಜಿ ಟ್ರೋಫಿಯಲ್ಲಿ ಕೌಶಿಕ್ ಅವರು ಕರ್ನಾಟಕ ತಂಡದ ಪರ ಗರಿಷ್ಠ ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಎಲ್ಲ 7 ಪಂದ್ಯಗಳಲ್ಲಿ 2 ಐದು ವಿಕೆಟ್ ಗೊಂಚಲುಗಳ ಸಹಿತ ಒಟ್ಟು 23 ವಿಕೆಟ್ಗಳನ್ನು ಉರುಳಿಸಿದ್ದರು.







