ದಾಖಲೆ ನಿರ್ಮಿಸಿದ ಗುಕೇಶ್ ಗುಣಗಾನ ಮಾಡಿದ ಕ್ಯಾಸ್ಪರೋವ್!

PC: x.com/GrandChessTour
ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ದಾಖಲೆಯನ್ನು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್ ಅವರ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವ ಭಾರತದ ಡಿ.ಗುಕೇಶ್ ಅವರನ್ನು ಚೆಸ್ ದಂತಕಥೆ ಕ್ಯಾಸ್ಪರೋವ್ ಅಭಿನಂದಿಸಿದ್ದಾರೆ. ಗುಕೇಶ್ ಅವರ ಗುರುವಾರದ ಸಾಧನೆಗೆ ಮುನ್ನ 22 ವರ್ಷ ವಯಸ್ಸಿನಲ್ಲಿ ವಿಶ್ವಚಾಂಪಿಯನ್ ಶಿಪ್ ಗೆದ್ದಿದ್ದ ರಷ್ಯಾದ ಕ್ಯಾಸ್ಪರೋವ್ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು. 1985ರಲ್ಲಿ ಅನತೋಲಿ ಕಾರ್ಪೋವ್ ವಿರುದ್ಧ ಗೆಲುವು ಸಾಧಿಸಿ ಕ್ಯಾಸ್ಪರೋವ್ ಈ ಸಾಧನೆ ಮಾಡಿದ್ದರು.
ಕೇವಲ 18 ವರ್ಷ ವಯಸ್ಸಿನ ಗುಕೇಶ್ ಗುರುವಾರ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರ ವಿರುದ್ಧ ಸಿಂಗಾಪುರದಲ್ಲಿ ನಡೆದ 14ನೇ ಪಂದ್ಯದಲ್ಲಿ ಗೆದ್ದು, 7.5-6.5 ಪಾಯಿಂಟ್ ಕಲೆ ಹಾಕಿದ್ದರು. ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕ್ಯಾಸ್ಪರೋವ್, "ಗುಕೇಶ್ ಅವರು ವಿಶ್ವ ಚೆಸ್ ಶೃಂಗವನ್ನು ವಶಪಡಿಸಿಕೊಂಡಿದ್ದಾರೆ" ಎಂದು ಬಣ್ಣಿಸಿದ್ದಾರೆ.
"ಇಂದಿನ ಜಯಕ್ಕಾಗಿ ಗುಕೇಶ್ ಅವರಿಗೆ ನನ್ನ ಆತ್ಮೀಯ ಅಭಿನಂದನೆಗಳು. ಎಲ್ಲಕ್ಕಿಂತ ಉತ್ತುಂಗವನ್ನು ಏರುವ ಮೂಲಕ ತಾಯಿಯನ್ನು ಸಂತಸಪಡಿಸಿದ್ದಾರೆ" ಎಂದು ಕ್ಯಾಸ್ಪರೋವ್ ಹೇಳಿದ್ದಾರೆ.
"ಗುಕೇಶ್ ತಮ್ಮ ಹಾದಿಯ ಎಲ್ಲ ವಿರೋಧಿಗಳನ್ನು ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿ, ಮತ್ತೇನನ್ನೂ ಕೇಳುವಂತಿಲ್ಲ" ಎಂದು 61 ವರ್ಷ ವಯಸ್ಸಿನ ಕ್ಯಾಸ್ಪರೋವ್ ಹೇಳಿದ್ದಾರೆ.
My congratulations to @DGukesh on his victory today. He has summitted the highest peak of all: making his mother happy!
— Garry Kasparov (@Kasparov63) December 12, 2024