ಅರ್ಜೆಂಟೀನ ತಂಡ ಕೇರಳಕ್ಕೆ ಬರುವುದು ಅನುಮಾನ!
ಅರ್ಜೆಂಟೀನ ತಂಡದ ವೇಳಾಪಟ್ಟಿಯಲ್ಲಿಲ್ಲ ಕೇರಳದಲ್ಲಿ ಆಡಲಿರುವ ಪಂದ್ಯ

ಲಿಯೊನೆಲ್ ಮೆಸ್ಸಿ | PTI
ಕೊಚ್ಚಿ : ಅರ್ಜೆಂಟೀನ ಫುಟ್ಬಾಲ್ ತಂಡದ 2026ರ ವೇಳಾಪಟ್ಟಿಯಲ್ಲಿ ಚೀನಾ, ಖತರ್ ಹಾಗೂ ಆಫ್ರಿಕಾದಲ್ಲಿ ಪಂದ್ಯಗಳನ್ನು ಯೋಜಿಸಲಾಗಿದೆ ಎಂದು ಬಹಿರಂಗವಾಗಿದ್ದು, ಈ ಮೂಲಕ ಲಿಯೊನೆಲ್ ಮೆಸ್ಸಿ ಹಾಗೂ ವಿಶ್ವಕಪ್ ವಿಜೇತ ಅರ್ಜೆಂಟೀನ ತಂಡದ ಆಟವನ್ನು ತಮ್ಮ ತವರು ನೆಲದಲ್ಲಿ ಕಣ್ತುಂಬಿಕೊಳ್ಳಬೇಕೆಂಬ ಕೇರಳ ಫುಟ್ಬಾಲ್ ಅಭಿಮಾನಿಗಳ ನಿರೀಕ್ಷೆಗಳು ಹುಸಿಯಾಗಿವೆ.
ಕಳೆದ ನವೆಂಬರ್ನಲ್ಲಿ ಸ್ಪೇನ್ನಲ್ಲಿ ಅರ್ಜೆಂಟೀನ ಫುಟ್ಬಾಲ್ ಸಂಸ್ಥೆಯೊಂದಿಗೆ ಚರ್ಚಿಸಿದ ನಂತರ ಕೇರಳ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಹಾಗೂ ಅವರ ತಂಡವು ಕೇರಳದಲ್ಲಿ ಸಂಭಾವ್ಯ ಪ್ರದರ್ಶನ ಪಂದ್ಯಗಳನ್ನು ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಮೆಸ್ಸಿ 2011ರಲ್ಲಿ ಕೊನೆಯ ಬಾರಿ ಭಾರತದಲ್ಲಿ ಆಡಿದ್ದರು. ಆಗ ಅವರು ಕೋಲ್ಕತಾದ ಸಾಲ್ಟ್ಲೇಕ್ ಸ್ಟೇಡಿಯಮ್ನಲ್ಲಿ ವೆನೆೆಜುವೆಲಾ ತಂಡದ ವಿರುದ್ಧ ಅಂತರ್ರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಿದ್ದರು. ಹಾಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಸಹಿತ ಕೇರಳದ ಹಲವರು ಫುಟ್ಬಾಲ್ ಪ್ರೇಮಿಗಳನ್ನು ಈ ಪಂದ್ಯ ಆಕರ್ಷಿಸಿತ್ತು.
ಕೇರಳದ ಮಲಪ್ಪುರಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳು ಅರ್ಜೆಂಟೀನ ರಾಷ್ಟ್ರೀಯ ತಂಡಕ್ಕೆ ಬಹಳ ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿವೆ. ಮೆಸ್ಸಿ ನಾಯಕತ್ವದಲ್ಲಿ ಖತರ್ನಲ್ಲಿ 2022ರ ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನ ತಂಡ ಚಾಂಪಿಯನ್ ಆದ ನಂತರ ಈ ಬೆಂಬಲ ತೀವ್ರಗೊಂಡಿದೆ.
ಮಲಪ್ಪುರಂ ಮೂಲದ ಅಬ್ದುರಹಿಮಾನ್, ಮೆಸ್ಸಿಯವರನ್ನು ಕೇರಳಕ್ಕೆ ಕರೆ ತರಲು ಸಕ್ರಿಯವಾಗಿ ಕೆಲಸ ಮಾಡಿದ್ದರು. ಕಳೆದ ವರ್ಷ ಅವರ ನಿಯೋಗವು ಸ್ಪೇನ್ಗೆ ಭೇಟಿ ನೀಡಿದ ನಂತರ 2026ರ ಕೊನೆಯ ತ್ರೈಮಾಸಿಕದಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎಂದು ಘೋಷಿಸಲಾಗಿತ್ತು.
ಫುಟ್ಬಾಲ್ ಪ್ರಿಯ ಕೇರಳ ರಾಜ್ಯವು ಮೆಸ್ಸಿ ಹಾಗೂ ಅರ್ಜೆಂಟೀನ ತಂಡವನ್ನು ತಮ್ಮ ನೆಲದಲ್ಲಿ ನೋಡುವ ಕನಸನ್ನು ಈಡೇರಿಸಿಕೊಳ್ಳಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಅರ್ಜೆಂಟೀನ ತಂಡದ ಪ್ರಸಕ್ತ ವೇಳಾಪಟ್ಟಿಯಲ್ಲಿ ಕೇರಳದಲ್ಲಿ ಆಡುವ ಯಾವುದೇ ಪಂದ್ಯಗಳು ಒಳಗೊಂಡಿಲ್ಲ.
ವಿಶ್ವ ಚಾಂಪಿಯನ್ ತಂಡವನ್ನು ರಾಜ್ಯಕ್ಕೆ ಕರೆ ತರಲು ಕೇರಳ ಸರಕಾರ ಹಾಗೂ ಕ್ರೀಡಾ ಸಚಿವ ಅಬ್ದುರಹಿಮಾನ್ ಮಾಡಿರುವ ಪ್ರಯತ್ನಕ್ಕೆ ಅಪೇಕ್ಷಿತ ಫಲ ಲಭಿಸಿಲ್ಲ. ಅರ್ಜೆಂಟೀನ ತಂಡದ ಕಟ್ಟಾ ಅಭಿಮಾನಿಗಳಾಗಿರುವ ಕೇರಳ ಫುಟ್ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರರನ್ನು ತವರು ನೆಲದ ಪಂದ್ಯಗಳಲ್ಲಿ ನೋಡಲು ಇನ್ನಷ್ಟು ಸಮಯ ಕಾಯಬೇಕಾಗಿದೆ.







