ಭಾರತೀಯ ಫುಟ್ಬಾಲ್ ಪ್ರಧಾನ ಕೋಚ್ ಆಗಿ ಖಾಲಿದ್ ಜಮೀಲ್

PC : @IndianFootball
ಹೊಸದಿಲ್ಲಿ, ಆ. 13: ಭಾರತೀಯ ಪುರುಷರ ಫುಟ್ಬಾಲ್ ತಂಡದ ಪೂರ್ಣಕಾಲಿಕ ಕೋಚ್ ಆಗಿ ಖಾಲಿದ್ ಜಮೀಲ್ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐ ಎಫ್ ಎಫ್) ಬುಧವಾರ ತಿಳಿಸಿದೆ.
ಅವರ ಅಧಿಕಾರಾವಧಿ ಎರಡು ವರ್ಷಗಳಾಗಿರುತ್ತವೆ ಮತ್ತು ಫಲಿತಾಂಶವನ್ನು ಆಧರಿಸಿ ಅವರ ಗುತ್ತಿಗೆಯನ್ನು ಇನ್ನೊಂದು ವರ್ಷ ವಿಸ್ತರಿಸಬಹುದಾಗಿದೆ ಎಂದು ಅದು ಹೇಳಿದೆ.
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ತಂಡ ಜಮ್ಶೆಡ್ ಪುರ ಎಫ್ ಸಿ ಯಿಂದ ಹೊರಬಂದ ಬಳಿಕ ಜಮೀಲ್ ಭಾರತೀಯ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಗುತ್ತಿಗೆಗೆ ಸಹಿ ಹಾಕಿದ್ದಾರೆ ಎಂದು ಎಐಎಫ್ಎಫ್ ತಿಳಿಸಿದೆ.
ಜಮೀಲ್ ತನ್ನ ಮೊದಲ ತರಬೇತಿ ಶಿಬಿರವನ್ನು ಬೆಂಗಳೂರಿನಲ್ಲಿರುವ ದ್ರಾವಿಡ್-ಪಡುಕೋಣೆ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ಆಗಸ್ಟ್ 15ರಂದು ಆರಂಭಿಸಲಿದ್ದಾರೆ. ಅವರ ಉಸ್ತುವಾರಿಯಲ್ಲಿ ಭಾರತೀಯ ಫುಟ್ಬಾಲ್ ತಂಡವು ಆಡುವ ಮೊದಲ ಪಂದ್ಯಾವಳಿ ಸಿಎಎಫ್ಎ ನೇಶನ್ಸ್ ಕಪ್. ಈ ಪಂದ್ಯಾವಳಿಯಲ್ಲಿ ಭಾರತವು ಆತಿಥೇಯ ತಝಕಿಸ್ತಾನ (ಆಗಸ್ಟ್ 29), ಇರಾನ್ (ಸೆಪ್ಟಂಬರ್ 1) ಮತ್ತು ಅಫ್ಘಾನಿಸ್ತಾನ (ಸೆಪ್ಟಂಬರ್ 4) ತಂಡಗಳನ್ನು ‘ಬಿ’ ಗುಂಪಿನಲ್ಲಿ ಎದುರಿಸಲಿದೆ.
ಜಮೀಲ್, ಮನೋಲೊ ಮಾರ್ಕೀಝ್ ರ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಭಾರತೀಯ ತಂಡದ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ, ಮಾರ್ಕೀಝ್ ರ ಗುತ್ತಿಗೆಯನ್ನು ಎ ಐ ಎಫ್ ಎಪ್ ಕಳೆದ ತಿಂಗಳು ರದ್ದುಪಡಿಸಿತ್ತು.
2012ರಲ್ಲಿ ಸಾವಿಯೊ ಮೆಡೇರ ಬಳಿಕ, ಪುರುಷರ ರಾಷ್ಟ್ರೀಯ ಫುಟ್ಬಾಲ್ ತಂಡದ ಮೊದಲ ಭಾರತೀಯ ಕೋಚ್ ಜಮೀಲ್ ಆಗಿದ್ದಾರೆ.
2016-17ರಲ್ಲಿ ಅವರ ನೇತೃತ್ವದ ಐಝ್ವಾಲ್ ಎಫ್ಸಿ ತಂಡವು ಐ-ಲೀಗ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು.







