ಖೇಲೊ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟ | ಪ್ಯಾರಾ ಆರ್ಚರ್ ಶೀತಲ್ ಗೆ ಬೆಳ್ಳಿ ಪದಕ
ಆರ್ಚರ್ ಶೀತಲ್
ಹೊಸದಿಲ್ಲಿ: ಖೇಲೊ ಇಂಡಿಯಾ ಎನ್ಟಿಪಿಸಿ ನ್ಯಾಶನಲ್ ರ್ಯಾಂಕಿಂಗ್ ಆರ್ಚರಿ ಕ್ರೀಡಾಕೂಟದಲ್ಲಿ ಏಶ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್ ಶೀತಲ್ ದೇವಿ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. ಜೂನಿಯರ್ ವಿಶ್ವ ಚಾಂಪಿಯನ್ ಹರ್ಯಾಣದ ಎಕ್ತಾ ರಾಣಿ ಮೊದಲ ಸ್ಥಾನ ಪಡೆದಿದ್ದಾರೆ.
ಡಿಡಿಎ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಸ್ಪರ್ಧಾವಳಿಯಲ್ಲಿ 17ರ ಹರೆಯದ ಶೀತಲ್ ಅವರು ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯ ಫೈನಲ್ ನಲ್ಲಿ ಎಕ್ತಾ ರಾಣಿ ವಿರುದ್ಧ 138-140 ಅಂತರದಿಂದ ಸೋತಿದ್ದಾರೆ.
ಹಾಂಗ್ಝೌ ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಎರಡು ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿ ಅಮೋಘ ಪ್ರದರ್ಶನ ನೀಡಿದ್ದ ಶೀತಲ್ ಈ ವರ್ಷಾರಂಭದಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ಖೇಲೊ ಇಂಡಿಯಾ ಸ್ಪರ್ಧೆಯಲ್ಲಿನ ತನ್ನ ಪ್ರದರ್ಶನವು ಮುಂಬರುವ ಸವಾಲಿಗೆ ಸಜ್ಜಾಗಲು ಅನುಕೂಲಕರವಾಗಲಿದೆ ಎಂದು ಶೀತಲ್ ನಂಬಿದ್ದಾರೆ.
ಚಿನ್ನದ ಪದಕ ಜಯಿಸಿರುವ ಎಕ್ತಾ 50,000 ರೂ. ಬಹುಮಾನ ಮೊತ್ತ ಸ್ವೀಕರಿಸಿದರೆ, ಶೀತಲ್ 40,000 ರೂ. ಬಹುಮಾನ ತನ್ನದಾಗಿಸಿಕೊಂಡರು.
ಟೂರ್ನಮೆಂಟನ್ನು ರಿಕರ್ವ್ ಹಾಗೂ ಕಾಂಪೌಂಡ್ ನಲ್ಲಿ ಸೀನಿಯರ್, ಜೂನಿಯರ್ ಹಾಗೂ ಸಬ್-ಜೂನಿಯರ್ ವಿಭಾಗಗಳಲ್ಲಿ ನಡೆಸಲಾಗಿದೆ. ಈ ಟೂರ್ನಿಯಲ್ಲಿ 87 ಬಿಲ್ಗಾರರು ಸ್ಪರ್ಧಿಸಿದ್ದಾರೆ.