ಇಂಗ್ಲೆಂಡ್ ಕೋಚಿಂಗ್ ತಂಡಕ್ಕೆ ವೆಸ್ಟ್ಇಂಡೀಸ್ ಮಾಜಿ ನಾಯಕ ಪೊಲಾರ್ಡ್

Photo : Twitter
ಲಂಡನ್ : ವೆಸ್ಟ್ಇಂಡೀಸ್ ನ ಮಾಜಿ ನಾಯಕ ಕಿರೊನ್ ಪೊಲಾರ್ಡ್ 2024ರ ಪುರುಷರ ಟಿ-20 ವಿಶ್ವಕಪ್ ಗಾಗಿ ಇಂಗ್ಲೆಂಡ್ ನ ಕೋಚಿಂಗ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ರವಿವಾರ ಪ್ರಕಟಿಸಿದೆ.
ಎಪ್ರಿಲ್ 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಪೊಲಾರ್ಡ್ ಮುಂದಿನ ವರ್ಷದ ಜೂನ್ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್ ವೇಳೆ ಇಂಗ್ಲೆಂಡ್ ತಂಡಕ್ಕೆ ವಿಶೇಷವಾಗಿ ಅಸಿಸ್ಟೆಂಟ್ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ.
ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ಕೆರಿಬಿಯನ್ ವಾತಾವರಣದ ಕುರಿತಂತೆ 36ರ ಹರೆಯದ ಪೊಲಾರ್ಡ್ ಇಂಗ್ಲೆಂಡ್ಗೆ ತನ್ನ ಅಪಾರ ಅನುಭವ ಹಂಚಿಕೊಳ್ಳಲಿದ್ದಾರೆ.
ಪೊಲಾರ್ಡ್ 2012ರಲ್ಲಿ ವೆಸ್ಟ್ಇಂಡೀಸ್ ತಂಡ ಟ್ವೆಂಟಿ-20 ವಿಶ್ವಕಪ್ ಜಯಿಲು ನೆರವಾಗಿದ್ದರು. ಆಗ ಅವರು ಟಿ-20 ಮಾದರಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದರು. ಪೊಲಾರ್ಡ್ ವೃತ್ತಿಜೀವನದಲ್ಲಿ 637 ಟಿ-20 ಪಂದ್ಯಗಳನ್ನು ಆಡಿದ್ದಾರೆ.
ಪೊಲಾರ್ಡ್ 63 ಟಿ-20 ಪಂದ್ಯಗಳಲ್ಲಿ ವೆಸ್ಟ್ಇಂಡೀಸ್ ನಾಯಕತ್ವವಹಿಸಿದ್ದರು. 101ಟಿ-20 ಪಂದ್ಯಗಳಲ್ಲಿ 1,569 ರನ್ ಗಳಿಸಿದ್ದು, 42 ವಿಕೆಟ್ಗಳನ್ನು ಉರುಳಿಸಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಐದು ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿರುವ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದಿದ್ದರೂ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ(ಸಿಪಿಎಲ್) ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವನ್ನು ಫೈನಲ್ನಲ್ಲಿ ನಾಯಕನಾಗಿ ಮುನ್ನಡೆಸಿದ್ದರು.
9ನೇ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯು ಜೂನ್ 1 ಹಾಗೂ ಜೂನ್ 30ರ ನಡುವೆ ನಡೆಯಲಿದ್ದು, ಬಾರ್ಬಡೋಸ್ ಕೆನ್ಸಿಂಗ್ಟನ್ ಓವಲ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
13 ತಿಂಗಳ ಹಿಂದೆ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಎರಡನೇ ಬಾರಿ ಪ್ರಶಸ್ತಿ ಜಯಿಸಿದ್ದು, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದೆ. ಈ ಬಾರಿಯ ಟೂರ್ನಮೆಂಟ್ನಲ್ಲಿ ತಂಡಗಳ ಸಂಖ್ಯೆಯನ್ನು 16ರಿಂದ 20ಕ್ಕೆ ಹೆಚ್ಚಿಸಲಾಗಿದೆ.







