ಸ್ವದೇಶದಲ್ಲಿ ಭಾರತದ ಅಜೇಯ ಗೆಲುವಿನ ಓಟಕ್ಕೆ ಕಿವೀಸ್ ಕಡಿವಾಣ
► ದ್ವಿತೀಯ ಟೆಸ್ಟ್: ನ್ಯೂಝಿಲ್ಯಾಂಡ್ಗೆ 113 ರನ್ ಜಯ, ಸ್ಯಾಂಟ್ನರ್ ಸ್ಪಿನ್ ಜಾದೂಗೆ ರೋಹಿತ್ ಪಡೆ ತತ್ತರ ► ಭಾರತೀಯ ನೆಲದಲ್ಲಿ ಮೊದಲ ಬಾರಿ ಸರಣಿ ಗೆದ್ದ ಟಾಮ್ ಲ್ಯಾಥಮ್ ಬಳಗ ► 2012ರ ನಂತರ ರೋಹಿತ್ ಪಡೆಗೆ ತಾಯ್ನಾಡಿನಲ್ಲಿ ಮೊದಲ ಸರಣಿ ಸೋಲು

PC : PTI
ಪುಣೆ : ನಾಲ್ಕು ಇನಿಂಗ್ಸ್ಗಳಲ್ಲಿ ನಾಲ್ಕು ಬಾರಿಯೂ ಬ್ಯಾಟಿಂಗ್ ಕುಸಿತ ಕಂಡಿರುವ ಭಾರತ ಕ್ರಿಕೆಟ್ ತಂಡವು ಸ್ವದೇಶದಲ್ಲಿ ಅಪರೂಪದ ಕಳಪೆ ಬ್ಯಾಟಿಂಗ್ಗೆ ಸಾಕ್ಷಿಯಾಯಿತು.
ಬೆಂಗಳೂರು ಟೆಸ್ಟ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ 46 ರನ್ಗೆ ಆಲೌಟಾಗಿದ್ದ ಭಾರತ ತಂಡವು, ಎರಡನೇ ಇನಿಂಗ್ಸ್ನಲ್ಲಿ 462 ರನ್ಗೆ ಸರ್ವಪತನಗೊಂಡಿತ್ತು. ಆ ನಂತರ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 156 ರನ್ ಗಳಿಸಲು ಶಕ್ತವಾಯಿತು. ಕಿವೀಸ್ಗೆ 103 ರನ್ ಮುನ್ನಡೆ ಬಿಟ್ಟುಕೊಟ್ಟಿತು.
ಮೂರನೇ ದಿನದಾಟವಾದ ಶನಿವಾರ ಗೆಲ್ಲಲು 359 ರನ್ ಗುರಿ ಪಡೆದಿದ್ದ ಭಾರತವು ಒಂದು ಹಂತದಲ್ಲಿ 1 ವಿಕೆಟ್ಗೆ 96 ರನ್ ಗಳಿಸಿ ಗೆಲುವಿನ ವಿಶ್ವಾಸದಲ್ಲಿತ್ತು. ಆನಂತರ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 245 ರನ್ಗೆ ಆಲೌಟಾಯಿತು. ಸ್ವದೇಶದಲ್ಲಿ ಸತತ 18 ಸರಣಿಗಳನ್ನು ಜಯಿಸಿ ಅಜೇಯ ದಾಖಲೆಯೊಂದಿಗೆ ಬೀಗುತ್ತಿದ್ದ ಭಾರತ ತಂಡಕ್ಕೆ ಶನಿವಾರ ನ್ಯೂಝಿಲ್ಯಾಂಡ್ ತಂಡ ಮರ್ಮಾಘಾತ ನೀಡಿದೆ.
113 ರನ್ ಅಂತರದಿಂದ ಜಯಶಾಲಿಯಾಗಿರುವ ನ್ಯೂಝಿಲ್ಯಾಂಡ್ ತಂಡ ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿದೆ. ಕಿವೀಸ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನವೆಂಬರ್ 1ರಿಂದ ಆರಂಭವಾಗಲಿದೆ.
ಟೀಮ್ ಇಂಡಿಯಾವು 2012ರ ಡಿಸೆಂಬರ್ ನಂತರ ಮೊದಲ ಬಾರಿ ಸ್ವದೇಶದಲ್ಲಿ ನಡೆದಿರುವ ಟೆಸ್ಟ್ ಸರಣಿಯನ್ನು ಸೋತಿದೆ. 12 ವರ್ಷಗಳ ಹಿಂದೆ ಕುಕ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.
ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವು ನ್ಯೂಝಿಲ್ಯಾಂಡ್ನ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಸ್ಯಾಂಟ್ನರ್ ಪಂದ್ಯದುದ್ದಕ್ಕೂ ಎಡಬಿಡದೆ ಭಾರತೀಯ ಬ್ಯಾಟರ್ಗಳನ್ನು ಕಾಡಿದರು. ಪಿಚ್ನಿಂದ ಟರ್ನ್ ಹಾಗೂ ಬೌನ್ಸ್ ಪಡೆಯುವ ಅವರ ಸಾಮರ್ಥ್ಯವು ಭಾರತದ ಬ್ಯಾಟರ್ಗಳಿಗೆ ಭೀತಿ ಹುಟ್ಟಿಸಿತು.
ಮೊದಲ ಇನಿಂಗ್ಸ್ನಲ್ಲಿ 53 ರನ್ ನೀಡಿ 7 ವಿಕೆಟ್ಗಳನ್ನು ಉರುಳಿಸಿದ್ದ ಸ್ಯಾಂಟ್ನರ್ ಎರಡನೇ ಇನಿಂಗ್ಸ್ನಲ್ಲೂ 104 ರನ್ ವೆಚ್ಚಕ್ಕೆ ಆರು ವಿಕೆಟ್ಗಳನ್ನು ಕಬಳಿಸಿ ಭಾರತೀಯ ಬ್ಯಾಟರ್ಗಳನ್ನು ದುಸ್ವಪ್ನವಾಗಿ ಕಾಡಿದರು.
ಇದಕ್ಕೂ ಮೊದಲು 5 ವಿಕೆಟ್ಗಳ ನಷ್ಟಕ್ಕೆ 198 ರನ್ ನಿಂದ ತನ್ನ 2ನೇ ಇನಿಂಗ್ಸ್ ಆರಂಭಿಸಿದ ನ್ಯೂಝಿಲ್ಯಾಂಡ್ ತಂಡವು ನಿನ್ನೆಯ ಮೊತ್ತಕ್ಕೆ 57 ರನ್ ಸೇರಿಸಿ 255 ರನ್ಗೆ ಆಲೌಟಾಯಿತು. ಸರಣಿಯಲ್ಲಿ ಮರು ಹೋರಾಟ ನೀಡಲು ಭಾರತವು 359 ರನ್ ಸವಾಲು ಪಡೆಯಿತು. ಆದರೆ ಮಿಚೆಲ್ ಸ್ಯಾಂಟ್ನರ್ ತನ್ನ ಕನಸಿನ ಓಟ ಮುಂದುವರಿಸಿ 104 ರನ್ಗೆ ಆರು ವಿಕೆಟ್ಗಳನ್ನು ಪಡೆದರು. ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಭಾರತದ ಉಳಿದ ಬ್ಯಾಟರ್ಗಳು ದಯನೀಯ ವೈಫಲ್ಯ ಕಂಡರು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(77 ರನ್, 65 ಎಸೆತ, 9 ಬೌಂಡರಿ, 3 ಸಿಕ್ಸರ್)ಭಾರತದ ರನ್ ಚೇಸ್ ವೇಳೆಗೆ ಭರ್ಜರಿ ಆರಂಭ ಒದಗಿಸಿದರು. ಕಿವೀಸ್ ಪಡೆಯ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಶುಭಮನ್ ಗಿಲ್(23 ರನ್, 31 ಎಸೆತ)ಅವರೊಂದಿಗೆ ಎರಡನೇ ವಿಕೆಟ್ಗೆ 62 ರನ್ ಜೊತೆಯಾಟ ನಡೆಸಿದರು.
ಗಿಲ್ ವಿಕೆಟನ್ನು ಉರುಳಿಸಿದ ಸ್ಯಾಂಟ್ನರ್ ಈ ಜೋಡಿಯನ್ನು ಬೇರ್ಪಡಿಸಿದರು. ಭಾರತದ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಜೈಸ್ವಾಲ್ ಅವರು ಸ್ಯಾಂಟ್ನರ್ ಸ್ಪಿನ್ ಮೋಡಿಗೆ ನಿರುತ್ತರವಾದರು.
ವಿಕೆಟ್ಕೀಪರ್ ರಿಷಭ್ ಪಂತ್(0) ರನೌಟಾದ ನಂತರ ಭಾರತ ತಂಡದ ಸಂಕಷ್ಟ ಹೆಚ್ಚಾಯಿತು.
ಮೊದಲ ಇನಿಂಗ್ಸ್ ನಲ್ಲಿ 1 ರನ್ಗೆ ಔಟಾಗಿ ನಿರಾಶೆೆಗೊಳಿಸಿದ್ದ ವಿರಾಟ್ ಕೊಹ್ಲಿ(17 ರನ್)2ನೇ ಇನಿಂಗ್ಸ್ನಲ್ಲಿ ಕೂಡ ಸ್ಯಾಂಟ್ನರ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಬೆಂಗಳೂರು ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 150 ರನ್ ಗಳಿಸಿದ್ದ ಸರ್ಫರಾಝ್ ಖಾನ್ 9 ರನ್ ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಕ್ಲೀನ್ ಬೌಲ್ಡಾದರು. ಸರ್ಫರಾಝ್ ಔಟಾದ ಬೆನ್ನಿಗೆ ವಾಶಿಂಗ್ಟನ್ ಸುಂದರ್(21 ರನ್, 47 ಎಸೆತ)ಫಿಲಿಪ್ಸ್ ಬೌಲಿಂಗ್ನಲ್ಲಿ ಯಂಗ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ರವೀಂದ್ರ ಜಡೇಜ (42 ರನ್, 84 ಎಸೆತ)ಹಾಗೂ ಆರ್.ಅಶ್ವಿನ್(18 ರನ್)8ನೇ ವಿಕೆಟ್ಗೆ 39 ರನ್ ಭಾಗೀದಾರಿಕೆಯ ಮೂಲಕ ಕಿವೀಸ್ ಗೆಲುವಿನ ಅಂತರ ತಗ್ಗಿಸಿದರು. ಅಶ್ವಿನ್ ವಿಕೆಟನ್ನು ಪಡೆದ ಮಿಚೆಲ್ ಸ್ಯಾಂಟ್ನರ್ ಮತ್ತೊಮ್ಮೆ ಆಘಾತ ನೀಡಿದರು.
ಆಕಾಶ್ದೀಪ್(1ರನ್)ಹಾಗೂ ಜಡೇಜ ವಿಕೆಟ್ಗಳನ್ನು ಪಡೆದ ಅಜಾಝ್ ಪಟೇಲ್ ಭಾರತದ 2ನೇ ಇನಿಂಗ್ಸ್ಗೆ ತೆರೆ ಎಳೆದರು.
ಪಂದ್ಯದಲ್ಲಿ ಒಟ್ಟು 13 ವಿಕೆಟ್ಗಳನ್ನು ಉರುಳಿಸಿದ್ದಲ್ಲದೆ, 33 ರನ್ ಕೊಡುಗೆ ನೀಡಿದ್ದ ಮಿಚೆಲ್ ಸ್ಯಾಂಟ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ತನಕ ಇನಿಂಗ್ಸ್ ವೊಂದರಲ್ಲಿ 3ಕ್ಕಿಂತ ಹೆಚ್ಚು ವಿಕೆಟ್ ಪಡೆಯದ ಸ್ಯಾಂಟ್ನರ್ 157 ರನ್ಗೆ 13 ವಿಕೆಟ್ಗಳನ್ನು ಕಬಳಿಸಿ ನ್ಯೂಝಿಲ್ಯಾಂಡ್ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಭಾರತದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಪ್ರವಾಸಿ ತಂಡದ 3ನೇ ಬೌಲರ್ ಎನಿಸಿಕೊಂಡರು. 2ನೇ ಇನಿಂಗ್ಸ್ನಲ್ಲಿ 29 ಓವರ್ ಬೌಲಿಂಗ್ ಮಾಡಿದ ಸ್ಯಾಂಟ್ನರ್ 6 ವಿಕೆಟ್ಗಳನ್ನು ಬಾಚಿಕೊಂಡರು.







