ಬಾಂಗ್ಲಾ ಟಿ20 ಸರಣಿಗೆ ಕೆ.ಎಲ್. ರಾಹುಲ್ ಪರಿಗಣನೆ?

ಕೆ.ಎಲ್. ರಾಹುಲ್ | PC : PTI
ಮುಂಬೈ: ಬಾಂಗ್ಲಾದೇಶ ಪ್ರವಾಸಕ್ಕೆ ಭಾರತೀಯ ತಂಡವನ್ನು ಆರಿಸುವಾಗ ಏಕದಿನ ಸರಣಿಯಲ್ಲದೆ ಟಿ20 ಸರಣಿಗೂ ಕೆ.ಎಲ್. ರಾಹುಲ್ರನ್ನು ಪರಿಗಣಿಸುವ ಸಾಧ್ಯತೆಯಿದೆ. ಅವರು ತನ್ನ ಕೊನೆಯ ಅಂತರ್ರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು ಬಹುತೇಕ ಎರಡೂವರೆ ವರ್ಷಗಳ ಹಿಂದೆ. ಅವರು ಈವರೆಗೆ ಭಾರತದ ಪರವಾಗಿ 72 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಆಗಸ್ಟ್ ನಲ್ಲಿ ಭಾರತದ ಬಾಂಗ್ಲಾದೇಶ ಪ್ರವಾಸ ನಡೆಯಲಿದ್ದು, ಅದರಲ್ಲಿ ತಲಾ 3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗಳು ಒಳಗೊಂಡಿವೆ.
2022 ನವೆಂಬರ್ 10ರಂದು ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಡಿರುವುದು ಅವರ ಕೊನೆಯ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿತ್ತು. ಅವರು ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಿದ್ದರು. ಅವರು ಕ್ರಿಸ್ ವೋಕ್ಸ್ ಎಸೆತದಲ್ಲಿ 5 ಎಸೆತಗಳಲ್ಲಿ 5 ರನ್ಗಳನ್ನು ಗಳಿಸಿ ನಿರ್ಗಮಿಸಿದ್ದರು. ಆ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಸೊಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿತ್ತು.
ಅವರು ಆ ವಿಶ್ವಕಪ್ ನಲ್ಲಿ 6 ಪಂದ್ಯಗಳಲ್ಲಿ 21.33ರ ಸರಾಸರಿಯಲ್ಲಿ ಮತ್ತು 120.75ರ ಸ್ಟ್ರೈಕ್ ರೇಟ್ ನಲ್ಲಿ ಕೇವಲ 128 ರನ್ ಗಳಿಸಿದ್ದರು. ನಂತರ ಅವರು ಟಿ20 ತಂಡದಿಂದ ಹೊರಬಿದ್ದರು.
ಆದರೆ, ಕಳೆದ 6 ತಿಂಗಳುಗಳಲ್ಲಿ ಟಿ20 ಕ್ಷೇತ್ರದಲ್ಲಿ ರಾಹುಲ್ ಮಾಡಿರುವ ಸಾಧನೆಗಳು ಆಯ್ಕೆಗಾರರು ಅವರತ್ತ ಗಮನಹರಿಸುವಂತೆ ಮಾಡಿವೆ.
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ನ ಐಪಿಎಲ್ ಪಂದ್ಯದಲ್ಲಿ ರಾಹುಲ್ ಕೇವಲ 65 ಎಸೆತಗಳಲ್ಲಿ 112 ರನ್ಗಳನ್ನು ಸಿಡಿಸಿದ್ದಾರೆ. ಇದೇ ಪಂದ್ಯದಲ್ಲಿ ಅತ್ಯಂತ ವೇಗವಾಗಿ 8,000 ಟಿ20 ರನ್ಗಳನ್ನು ಪೂರೈಸಿದ ಭಾರತೀಯನೂ ಅವರಾದರು. ಅವರು ಈ ಸಾಧನೆಯನ್ನು ಕೇವಲ 224 ಇನಿಂಗ್ಸ್ಗಳಲ್ಲಿ ಮಾಡಿದ್ದಾರೆ.
ಐಪಿಎಲ್ 2025ರಲ್ಲಿ, 33 ವರ್ಷದ ರಾಹುಲ್ ಈವರೆಗೆ 11 ಪಂದ್ಯಗಳನ್ನು ಆಡಿದ್ದು, 148.04ರ ಸ್ಟ್ರೈಕ್ ರೇಟ್ನಲ್ಲಿ 333 ಎಸೆತಗಳಿಂದ 493 ರನ್ಗಳನ್ನು ಗಳಿಸಿದ್ದಾರೆ.