ಇಂಗ್ಲೆಂಡ್ ನೆಲದಲ್ಲಿ ಸಾವಿರಕ್ಕೂ ಅಧಿಕ ಟೆಸ್ಟ್ ರನ್ ಗಳಿಸುವ ಹಾದಿಯಲ್ಲಿ ಕೆ.ಎಲ್.ರಾಹುಲ್!

ಕೆ.ಎಲ್.ರಾಹುಲ್ | PC : PTI
ಲಂಡನ್ : ಭಾರತೀಯ ಬ್ಯಾಟರ್ ಕೆ.ಎಲ್.ರಾಹುಲ್ ಅವರು ಇಂಗ್ಲೆಂಡ್ ನೆಲದಲ್ಲಿ 1,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರ ಗುಂಪಿಗೆ ಸೇರುವ ಅಂಚಿನಲ್ಲಿದ್ದಾರೆ.
ಜುಲೈ 23ರಂದು ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಆಡಲು ರಾಹುಲ್ ಸಜ್ಜಾಗುತ್ತಿದ್ದು, ಸದ್ಯ ಸರಣಿಯಲ್ಲಿ ಇಂಗ್ಲೆಂಡ್ ತಂಡವು 2-1 ಮುನ್ನಡೆಯಲ್ಲಿದೆ.
ರಾಹುಲ್ ಅವರು ಇಂಗ್ಲೆಂಡ್ ನೆಲದಲ್ಲಿ 12 ಟೆಸ್ಟ್ ಪಂದ್ಯಗಳ 24 ಇನಿಂಗ್ಸ್ಗಳಲ್ಲಿ 4 ಶತಕಗಳು ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 989ರನ್ ಗಳಿಸಿದ್ದು, 41.20 ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. 149 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ಇಂಗ್ಲೆಂಡ್ ನೆಲದಲ್ಲಿ ಈ ಹಿಂದೆ ಕೇವಲ ಮೂವರು ಭಾರತೀಯ ಬ್ಯಾಟರ್ಗಳು 1,000 ಟೆಸ್ಟ್ ರನ್ ಮೈಲಿಗಲ್ಲು ಸಾಧಿಸಿದ್ದಾರೆ. ಸಚಿನ್ ತೆಂಡುಲ್ಕರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅವರು 54.31ರ ಸರಾಸರಿಯಲ್ಲಿ 17 ಟೆಸ್ಟ್ ಪಂದ್ಯಗಳಲ್ಲಿ 1,575 ರನ್ ಗಳಿಸಿದ್ದಾರೆ. ಆ ನಂತರ ರಾಹುಲ್ ದ್ರಾವಿಡ್(13 ಟೆಸ್ಟ್, 68.80ರ ಸರಾಸರಿ, 1,376 ರನ್)ಹಾಗೂ ಸುನೀಲ್ ಗವಾಸ್ಕರ್(16 ಟೆಸ್ಟ್, 41.14 ಸರಾಸರಿ, 1,152 ರನ್)ಅವರಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಸರಣಿಯಲ್ಲಿ ರಾಹುಲ್ ಅವರು ಭರ್ಜರಿ ಫಾರ್ಮ್ನಲ್ಲಿದ್ದು, 3 ಟೆಸ್ಟ್ ಪಂದ್ಯಗಳಲ್ಲಿ 62.50ರ ಸರಾಸರಿಯಲ್ಲಿ 2 ಶತಕಗಳು ಹಾಗೂ ಒಂದು ಅರ್ಧಶತಕಗಳ ಸಹಿತ ಒಟ್ಟು 375 ರನ್ ಗಳಿಸಿದ್ದಾರೆ. ಸರಣಿಯಲ್ಲಿ ನಾಲ್ಕನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.
ರಾಹುಲ್ ಅವರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ತನ್ನ 2ನೇ ಶತಕವನ್ನು ಗಳಿಸಿದ ಹೊರತಾಗಿಯೂ ಭಾರತ ತಂಡವು 3ನೇ ಟೆಸ್ಟ್ ಪಂದ್ಯವನ್ನು ಕೇವಲ 22 ರನ್ನಿಂದ ಸೋತಿತ್ತು. ಇಂಗ್ಲೆಂಡ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸುವತ್ತ ಗಮನ ಹರಿಸಿರುವ ರಾಹುಲ್, ಮ್ಯಾಂಚೆಸ್ಟರ್ನಲ್ಲಿ ಭಾರತ ತಂಡವು ಗೆಲುವು ದಾಖಲಿಸಿ ಸರಣಿ ಸಮಬಲಗೊಳಿಸಲು ಕೊಡುಗೆ ನೀಡುವ ವಿಶ್ವಾಸದಲ್ಲಿದ್ದಾರೆ.







