ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಕೆ.ಎಲ್.ರಾಹುಲ್ ನಾಯಕ

Photo: sports.ndtv
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಹಿರಿಯ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ರವಿವಾರ ಭಾರತ ತಂಡದ ನಾಯಕರನ್ನಾಗಿ ಪ್ರಕಟಿಸಲಾಗಿದೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯಗೊಂಡಿರುವುದರಿಂದ ಈ ನೇಮಕ ಮಾಡಲಾಗಿದೆ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಶುಭಮನ್ ಗಿಲ್ ಇದುವರೆಗೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಗುವಾಹಟಿಯಲ್ಲಿ ಪ್ರಾರಂಭಗೊಂಡಿರುವ ಎರಡನೆ ಟೆಸ್ಟ್ ನಲ್ಲೂ ಸ್ಥಾನ ಪಡೆದಿಲ್ಲ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ದಂತಕತೆ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಮರಳಿದ್ದು, ಇವರೊಂದಿಗೆ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವೇಗಿ ಜಸ್ಪ್ರೀತ್ ಬುಮ್ರಾಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ತಂಡದಲ್ಲಿ ಸ್ಥಾನ ಪಡೆದಿಲ್ಲ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪ್ರಥಮ ಪಂದ್ಯ ನವೆಂಬರ್ 30ರಂದು ನಡೆಯಲಿದ್ದು, ಡಿಸೆಂಬರ್ 3 ಹಾಗೂ ಡಿಸೆಂಬರ್ 6ರಂದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಏಕದಿನ ಪಂದ್ಯಗಳು ನಡೆಯಲಿವೆ.
ಈ ನಡುವೆ, ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬಲಗಾಲಿನ ಮೂಳೆಮುರಿತಕ್ಕೆ ಗುರಿಯಾಗಿ ತಂಡದಿಂದ ಹೊರಗುಳಿದಿದ್ದ ರಿಷಭ್ ಪಂತ್ ಕೂಡಾ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ.
ಯಶಸ್ವಿ ಜೈಸ್ವಾಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ರೋಹಿತ್ ಶರ್ಮರೊಂದಿಗೆ ಅವರು ಇನಿಂಗ್ಸ್ ಪ್ರಾರಂಭಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಭಾರತ ತಂಡ:
ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಶದೀಪ್ ಸಿಂಗ್ ಹಾಗೂ ಧ್ರುವ್ ಜುರೇಲ್.







