ಪ್ರಥಮ ದರ್ಜೆ ಕ್ರಿಕೆಟ್: ಕೊಹ್ಲಿ ಅವರನ್ನು ಕ್ಲೀನ್ಬೌಲ್ಡ್ ಮಾಡಿದ 9ನೇ ವೇಗಿ ಹಿಮಾಂಶು ಸಾಂಗ್ವಾನ್

ಹಿಮಾಂಶು ಸಾಂಗ್ವಾನ್ | PC : PTI
ಚೆನ್ನೈ: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ 9ನೇ ವೇಗದ ಬೌಲರ್ ಎಂಬ ಕೀರ್ತಿಗೆ ಹಿಮಾಂಶು ಸಾಂಗ್ವಾನ್ ಪಾತ್ರರಾದರು. ಶುಕ್ರವಾರ ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ನಡೆದ ದಿಲ್ಲಿ-ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ರೈಲ್ವೇಸ್ ಬೌಲರ್ ಸಾಂಗ್ವಾನ್ ಈ ಸಾಧನೆ ಮಾಡಿದರು.
4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕೊಹ್ಲಿ ಅವರು ಇನಿಂಗ್ಸ್ನ 28ನೇ ಓವರ್ನಲ್ಲಿ 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಬಲಗೈ ವೇಗದ ಬೌಲರ್ ಸಾಂಗ್ವಾನ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು. ಅದಕ್ಕೂ ಹಿಂದಿನ ಎಸೆತದಲ್ಲಿ ಕೊಹ್ಲಿ ಬೌಂಡರಿ ಗಳಿಸಿದ್ದರು. ಕೊಹ್ಲಿ ಅದೇ ರೀತಿಯ ಹೊಡೆತಕ್ಕೆ ಕೈಹಾಕಿದಾಗ ಚೆಂಡು ಸ್ವಿಂಗ್ ಆಗಿ ವಿಕೆಟನ್ನು ಉದುರಿಸಿತು.
ಕೊಹ್ಲಿ 2022ರಲ್ಲಿ ಇಂಗ್ಲೆಂಡ್ನ ವೇಗಿ ಮ್ಯಾಥ್ಯೂ ಪಾಟ್ಸ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆಗಿದ್ದರು. ತನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 24 ಬಾರಿ ಕ್ಲೀನ್ಬೌಲ್ಡ್ ಆಗಿದ್ದಾರೆ.
*ದಿಲ್ಲಿ 334/7: ರೈಲ್ವೇಸ್ ತಂಡದ ಮೊದಲ ಇನಿಂಗ್ಸ್ ಮೊತ್ತ 241 ರನ್ಗೆ ಉತ್ತರವಾಗಿ ದಿಲ್ಲಿ ತಂಡವು ಶುಕ್ರವಾರ 2ನೇ ದಿನದಾಟದಂತ್ಯಕ್ಕೆ 7 ವಿಕೆಟ್ಗಳ ನಷ್ಟಕ್ಕೆ 334 ರನ್ ಗಳಿಸಿ 93 ರನ್ ಮುನ್ನಡೆಯಲ್ಲಿದೆ. ನಾಯಕ ಆಯುಷ್ ಬದೋನಿ(99 ರನ್, 77 ಎಸೆತ)ಹಾಗೂ ಸುಮಿತ್ ಮಾಥುರ್(ಔಟಾಗದೆ 78, 189 ಎಸೆತ)ಅರ್ಧಶತಕದ ಕೊಡುಗೆ ನೀಡಿದ್ದಾರೆ.
ಹಿಮಾಂಶು(2-46) ಹಾಗೂ ಕುನಾಲ್ ಯಾದವ್(2-82) ತಲಾ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
*ವಿರಾಟ್ ಕೊಹ್ಲಿ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ವೇಗದ ಬೌಲರ್ಗಳು
1)ಶೈಲೇಂದರ್ ಗೆಹ್ಲೋಟ್-ರಾಜಸ್ಥಾನ(2006)
2)ಅಸದ್ ಅಲಿ-ನಾರ್ಥನ್ ಗ್ಯಾಸ್ ಪೈಪ್ಲೈನ್ಸ್ ಲಿ.(2008)
3)ಲಿಯಾಮ್ ಪ್ಲುಂಕೆಟ್-ಇಂಗ್ಲೆಂಡ್(2014)
4)ಮಿಚೆಲ್ ಜಾನ್ಸನ್-ಆಸ್ಟ್ರೇಲಿಯ(2014)
5)ಶನೊನ್ ಗ್ಯಾಬ್ರಿಯೆಲ್-ವೆಸ್ಟ್ಇಂಡೀಸ್(2016)
6)ಕಾಗಿಸೊ ರಬಾಡ-ದಕ್ಷಿಣ ಆಫ್ರಿಕಾ(2018)
7)ಬೆನ್ ಸ್ಟೋಕ್ಸ್-ಇಂಗ್ಲೆಂಡ್(2021)
8)ಮ್ಯಾಟ್ ಪಾಟ್ಸ್-ಇಂಗ್ಲೆಂಡ್(2022)
9)ಹಿಮಾಂಶು ಸಾಂಗ್ವಾನ್-ರೈಲ್ವೇಸ್(2025)







