ಕೊಹ್ಲಿ ʼವಿರಾಟ್ʼ ಆಟಗಾರನಾಗಿ ಬೆಳೆದಿದ್ದಾರೆ ; ಸಚಿನ್ ತೆಂಡುಲ್ಕರ್
50ನೇ ಶತಕ ದಾಖಲೆ ಬರೆದ ಕೊಹ್ಲಿ ಕೊಂಡಾಡಿದ ಮಾಸ್ಟರ್ ಬ್ಲಾಸ್ಟರ್

ವಿರಾಟ್ ಕೊಹ್ಲಿ | Photo: PTI
ಮುಂಬೈ : ಕೊಹ್ಲಿ ತಮ್ಮ 50 ನೇ ಶತಕದ ಜೊತೆ ಸಚಿನ್ ದಾಖಲೆ ಮುರಿದಿದ್ದನ್ನು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಾಂಖೆಡೆ ಸ್ಟೇಡಿಯಂನಲ್ಲಿ ಕೂತು ಕಣ್ತುಂಬಿಕೊಂಡರು. ವಿರಾಟ್ ಕೊಹ್ಲಿಯ ಶತಕದ ಅರ್ಧ ಶತಕದ ಸಾಧನೆಯನ್ನು ಕೊಂಡಾಡಿರುವ ಸಚಿನ್, ಕೊಹ್ಲಿ ಹೊಗಳಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ .
ತಮ್ಮ x ಪೋಸ್ಟ್ ನಲ್ಲಿ ಸಚಿನ್ ತೆಂಡುಲ್ಕರ್ ಕೊಹ್ಲಿ ಜೊತೆಗೆ ಡ್ರೆಸಿಂಗ್ ರೂಂ ಹಂಚಿಕೊಂಡ ದಿನಗಳನ್ನು ನೆನಪಿಸಿದ್ದಾರೆ. “ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಭೇಟಿಯಾದಾಗ, ನನ್ನ ಪಾದಗಳನ್ನು ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನು ಪ್ರಾಂಕ್ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ಶೀಘ್ರದಲ್ಲೇ ನೀವು ನನ್ನ ಹೃದಯವನ್ನು ಮುಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ”.
“ಒಬ್ಬ ಭಾರತೀಯನೇ ನನ್ನ ದಾಖಲೆಯನ್ನು ಮುರಿದಿದದ್ದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರಾವುದೂ ಇಲ್ಲ. ಅದೂ ವಿಶ್ವಕಪ್ ಸೆಮಿಫೈನಲ್ ನಂತಹ ದೊಡ್ಡ ವೇದಿಕೆಯಲ್ಲಿ. ಜೊತೆಗೆ ನನ್ನ ತವರು ಮೈದಾನದಲ್ಲಿ. ಇದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ” ಎಂದು ಸಚಿನ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.







