ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಕೊಹ್ಲಿ

Photo: x.com/CricketNDTV
ಹೊಸದಿಲ್ಲಿ: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಶುಕ್ರವಾರ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿಶ್ವದಾಖಲೆ ಸ್ಥಾಪಿಸಿದರು. ಮೊದಲ ವಿಕೆಟ್ ಜತೆಗೆ ವೆಂಕಟೇಶ್ ಅಯ್ಯರ್ ಜತೆಗೆ 60 ರನ್ಗಳ ಜತೆಯಾಟ ನೀಡುವ ಮೂಲಕ ಟಿ20 ಕ್ರಿಕೆಟ್ನಲ್ಲಿ 211ನೇ ಬಾರಿ 50ಕ್ಕೂ ಅಧಿಕ ಜತೆಯಾಟ ನೀಡಿದ ಕೀರ್ತಿಗೆ ಪಾತ್ರರಾದರು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಅಲೆಕ್ಸ್ ಹೇಲ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಕೊಹ್ಲಿ ಪುಡಿಗಟ್ಟಿದ್ದಾರೆ. ಇದೀಗ ಅತಿಹೆಚ್ಚು ಬಾರಿ 50ಕ್ಕೂ ಅಧಿಕ ರನ್ಗಳ ಜತೆಯಾಟದಲ್ಲಿ ಪಾಲ್ಗೊಂಡ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿಯವರದ್ದು. 200 ಜತೆಯಾಟಗಳೊಂದಿಗೆ ಡೇವಿಡ್ ವಾರ್ನರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ (196) ಮತ್ತು ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್ (191) ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಇದ್ದಾರೆ.
ಇಶಾನ್ ಕಿಶನ್ (79), ಅಭಿಷೇಕ್ ಶರ್ಮಾ (56) ಮತ್ತು ಹೆನ್ರಿಚ್ ಕ್ಲಾಸನ್ (51) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ನಾಲ್ಕು ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿದರೆ, ಆರ್ಸಿಬಿ 20 ಓವರ್ಗಳಲ್ಲಿ 200 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇಶಾನ್ ಕಿಶನ್ ಹಾಗೂ ಕ್ಲಾಸನ್ 113 ರನ್ಗಳ ಮೂರನೇ ವಿಕೆಟ್ ಜತೆಯಾಟ ಆರ್ಸಿಬಿ ಪಾಲಿಗೆ ದುಬಾರಿ ಎನಿಸಿತು.




