ನಿವೃತ್ತಿ ಬೆಳವಣಿಗೆಗಳ ನಿರ್ವಹಣೆ ಬಗ್ಗೆ ಕೊಹ್ಲಿ ಅಸಮಾಧಾನಗೊಂಡಿದ್ದರು: ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್
ಇನ್ನಷ್ಟು ಟೆಸ್ಟ್ ಪಂದ್ಯ ಆಡಬಹುದಿತ್ತು; ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದರು ಎಂದ ಮಾಜಿ ಕ್ರಿಕೆಟಿಗ

ವಾಸಿಮ್ ಜಾಫರ್ | ವಿರಾಟ್ ಕೊಹ್ಲಿ Photo: x.com/circleofcricket
ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ ಹಿಂದೆ ನಡೆದ ಬೆಳವಣಿಗೆಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು. ನಿವೃತ್ತಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಕೊಹ್ಲಿ ಕೊಂಚ ಅಸಮಾಧಾನಗೊಂಡಿದ್ದರು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
‘ವಿರಾಟ್ ಅವರಂತಹ ಆಟಗಾರರು ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಸೆಳೆಯುತ್ತಾರೆ. ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅವರು ಖಂಡಿತವಾಗಿಯೂ ಇನ್ನಷ್ಟು ಟೆಸ್ಟ್ ಪಂದ್ಯಗಳನ್ನು ಆಡಬಹುದಿತ್ತು’ ಎಂದು ಜಾಫರ್ ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಅವರು, ‘ವಿಷಯಗಳನ್ನು ನಿರ್ವಹಿಸಿದ ರೀತಿಯ ಬಗ್ಗೆ ವಿರಾಟ್ ಕೊಂಚ ಅಸಮಾಧಾನಗೊಂಡಿದ್ದರು ಎಂದು ನನಗೆ ಅನ್ನಿಸಿತು. ವಾಸ್ತವವಾಗಿ ಏನಾಯಿತು ಎಂಬುದನ್ನು ಸ್ವತಃ ವಿರಾಟ್ ಅವರಿಂದಲೇ ಕೇಳುವವರೆಗೆ ನಮಗೆ ಖಚಿತವಾಗಿ ತಿಳಿಯುವುದಿಲ್ಲ’ ಎಂದಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಹಲವು ತಿಂಗಳುಗಳಿಂದ ಅನಿಶ್ಚಿತತೆ ಇದ್ದ ಬಳಿಕ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಮುಂದುವರಿಯಲು ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಅವರು ಉತ್ಸುಕರಾಗಿದ್ದರು. 2025ರ ಜನವರಿಯಲ್ಲಿ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ ನತ್ತ ಅವರ ಬದ್ಧತೆಯನ್ನು ತೋರಿಸಿತ್ತು.
ಆದರೆ, ಎಪ್ರಿಲ್ ನಲ್ಲಿ ಪರಿಸ್ಥಿತಿ ಬದಲಾಯಿತು ಎಂದು ವರದಿಯಾಗಿದೆ. ಬೆಳವಣಿಗೆಗಳಿಂದ ನಿರಾಶೆಗೊಂಡಿದ್ದ ಕೊಹ್ಲಿ, ಇಂಗ್ಲೆಂಡ್ ಪ್ರವಾಸದ ಭಾಗವಾಗಲು ಬಯಸುವುದಿಲ್ಲ ಎಂದು ಆಯ್ಕೆಗಾರರಿಗೆ ತಿಳಿಸಿದ್ದರು ಎನ್ನಲಾಗಿದೆ. ಅವರನ್ನು ಮನವೊಲಿಸಲು ಆಪ್ತರು ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕೆಲವು ಅಧಿಕಾರಿಗಳು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ.
ಕೊಹ್ಲಿ ನಿವೃತ್ತಿ ನಿರ್ಧಾರಕ್ಕೆ ಕಾರಣವಾದ ಸನ್ನಿವೇಶಗಳ ನಿರ್ವಹಣೆಯನ್ನು ಪ್ರಶ್ನಿಸಿರುವ ಜಾಫರ್, ಇಂಗ್ಲೆಂಡ್ ಪ್ರವಾಸಕ್ಕಾಗಿ ಕೊಹ್ಲಿ ನಡೆಸಿದ್ದ ಸಿದ್ಧತೆಯನ್ನು ಉಲ್ಲೇಖಿಸಿದ್ದಾರೆ.
‘ಅವರು ಇಂಗ್ಲೆಂಡ್ ಪ್ರವಾಸಕ್ಕಾಗಿ ಸಿದ್ಧತೆ ನಡೆಸುತ್ತಿದ್ದರು. ಹೀಗಾಗಿ, ಈ ಎಲ್ಲ ಬೆಳವಣಿಗೆಗಳನ್ನು ಇನ್ನೂ ಉತ್ತಮವಾಗಿ ನಿರ್ವಹಿಸಬಹುದಿತ್ತು. ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರಗಳನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು’ ಎಂದು ಜಾಫರ್ ಹೇಳಿದ್ದಾರೆ.
ಕೊಹ್ಲಿ 2025ರ ಮೇ 12ರಂದು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಇದರೊಂದಿಗೆ 14 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿತ್ತು. ಅವರು 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳ ಸಹಿತ ಒಟ್ಟು 9,230 ರನ್ ಗಳಿಸಿದ್ದಾರೆ.






