IPL | ಅಲೆನ್, ರಘುವಂಶಿ, ಗ್ರೀನ್ ಅರ್ಧಶತಕ: ಗುಜರಾತ್ ವಿರುದ್ಧ ಕೆಕೆಆರ್ಗೆ ಗೆಲುವು

Photo credit: X/@IPL
ಕೋಲ್ಕತಾ: ಫಿನ್ ಅಲೆನ್(93 ರನ್, 35 ಎಸೆತ, 4 ಬೌಂಡರಿ, 10 ಸಿಕ್ಸರ್), ಎ.ರಘುವಂಶಿ(ಔಟಾಗದೆ 82, 44 ಎಸೆತ, 4 ಬೌಂಡರಿ, 7 ಸಿಕ್ಸರ್)ಹಾಗೂ ಕ್ಯಾಮರೂನ್ ಗ್ರೀನ್(ಔಟಾಗದೆ 52, 28 ಎಸೆತ, 3 ಬೌಂಡರಿ, 4 ಸಿಕ್ಸರ್)ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು 29 ರನ್ಗಳ ಅಂತರದಿಂದ ಮಣಿಸಿದೆ.
ಶನಿವಾರ ನಡೆದ 60ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಕೆಕೆಆರ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ ಎರಡು ವಿಕೆಟ್ಗಳ ನಷ್ಟಕ್ಕೆ 247 ರನ್ ಗಳಿಸಿತು.
ಗೆಲ್ಲಲು 248 ರನ್ ಗುರಿ ಪಡೆದ ಗುಜರಾತ್ ತಂಡವು 20 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳ ನಷ್ಟಕ್ಕೆ 218 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸೋತ ಹೊರತಾಗಿಯೂ ಗುಜರಾತ್ ತಂಡ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಐದನೇ ಗೆಲುವು ದಾಖಲಿಸಿರುವ ಕೆಕೆಆರ್ ಒಂದು ಸ್ಥಾನ ಮೇಲೇರಿದೆ.
ನಾಯಕ ಶುಭಮನ್ ಗಿಲ್(85 ರನ್, 49 ಎಸೆತ, 5 ಬೌಂಡರಿ,7 ಸಿಕ್ಸರ್)ಹಾಗೂ ಜೋಸ್ ಬಟ್ಲರ್( 57 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್)ಎರಡನೇ ವಿಕೆಟ್ಗೆ 128 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ ಇದು ಗೆಲುವಿಗೆ ಸಾಕಾಗಲಿಲ್ಲ.
ಗುಜರಾತ್ 42 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಯಾಗಿದ್ದ ಸಾಯಿ ಸುದರ್ಶನ್(53 ರನ್, 28 ಎಸೆತ, 6 ಬೌಂಡರಿ,3 ಸಿಕ್ಸರ್ ಮತ್ತೆ ಬ್ಯಾಟಿಂಗ್ ಮುಂದುವರಿಸಿದರು. ಕೆಕೆಆರ್ ಪರ ಸುನೀಲ್ ನರೇನ್(2-29)ಯಶಸ್ವಿ ಪ್ರದರ್ಶನ ನೀಡಿದರು.
ಕೆಕೆಆರ್ 247/2: ಇದಕ್ಕೂ ಮೊದಲು ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ(14 ರನ್, 14 ಎಸೆತ)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಫಿನ್ ಅಲೆನ್ 4.3 ಓವರ್ಗಳಲ್ಲಿ 44 ರನ್ ಸೇರಿಸಿ ತಂಡಕ್ಕೆ ಸಾಧಾರಣ ಆರಂಭ ಒದಗಿಸಿದರು.
ರಘುವಂಶಿ ಅವರೊಂದಿಗೆ ಕೈಜೋಡಿಸಿದ ಅಲೆನ್ ಎರಡನೇ ವಿಕೆಟ್ಗೆ 95 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಅಲೆನ್ ವಿಕೆಟನ್ನು ಉರುಳಿಸಿದ ಸಾಯಿ ಕಿಶೋರ್ ಈ ಜೋಡಿಯನ್ನು ಬೇರ್ಪಡಿಸಿದರು.
ಮೂರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 108 ರನ್ ಸೇರಿಸಿದ ರಘುವಂಶಿ ಹಾಗೂ ಕ್ಯಾಮರೂನ್ ಗ್ರೀನ್ ಕೆಕೆಆರ್ ಎರಡು ವಿಕೆಟ್ಗಳ ನಷ್ಟಕ್ಕೆ 247 ರನ್ ಗಳಿಸುವಲ್ಲಿ ನೆರವಾದರು.






