ನಾಳೆ(ಜು.26) ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ ಫೈನಲ್ ; ಕೊನೆರು ಹಂಪಿ Vs ದಿವ್ಯಾ ದೇಶ್ಮುಖ್

PC : X \ @theprayagtiwari
ಹೊಸದಿಲ್ಲಿ, ಜು. 25: ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ನ ಗ್ರ್ಯಾಂಡ್ ಫಿನಾಲೆ ಜಾರ್ಜಿಯದ ಬಟುಮಿಯಲ್ಲಿ ಶನಿವಾರ ಆರಂಭಗೊಳ್ಳಲಿದೆ. ಸ್ಪರ್ಧೆಯು ಟೈಬ್ರೇಕ್ ಹಂತಕ್ಕೆ ಹೋಗದಿದ್ದರೆ ರವಿವಾರದ ವೇಳೆಗೆ ಚೆಸ್ ಜಗತ್ತಿನ ನೂತನ ರಾಣಿಯ ಉದಯವಾಗುತ್ತದೆ. ಒಂದು ವೇಳೆ ಸ್ಪರ್ಧೆಯು ಟೈಬ್ರೇಕ್ಗೆ ಹೋದರೆ ಅದು ಸೋಮವಾರ ನಡೆಯುತ್ತದೆ.
ಏನಿದ್ದರೂ, ಒಂದು ವಿಷಯ ಸ್ಪಷ್ಟ: ಭಾರತವು ಒಂದು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಲಿದೆ.
ಮಹಿಳೆಯರ ಚೆಸ್ ಯಾವತ್ತೂ ಚೀನೀ ಗ್ರಾಂಡ್ ಮಾಸ್ಟರ್ ಗಳ ಆಡುಂಬೊಲವಾಗಿದೆ. ಹಾಲಿ ವಿಶ್ವ ರ್ಯಾಂಕಿಂಗ್ ನ ಅಗ್ರ ಏಳು ಆಟಗಾರರಲ್ಲಿ ಐವರು ಚೀನೀಯರೇ ಆಗಿದ್ದಾರೆ. ಆದರೆ, ಮಹಿಳೆಯರ ಚೆಸ್ ವಿಶ್ವ ಕಪ್ ಆರಂಭವಾದಂದಿನಿಂದ ಸತತ ಮೂರನೇ ಬಾರಿಯೂ ಫೈನಲ್ ನಲ್ಲಿ ಚೀನೀ ಆಟಗಾರ್ತಿಯರು ಇಲ್ಲ. ಚೀನೀ ಗ್ರಾಂಡ್ ಮಾಸ್ಟರ್ ಗಳಾದ ಟಾನ್ ರೊಂಗ್ಯಿ ಮತ್ತು ಲೇ ಟಿಂಗ್ಜೀ ಅವರನ್ನು ಕ್ರಮವಾಗಿ ಭಾರತೀಯ ಇಂಟರ್ ನ್ಯಾಶನಲ್ ಮಾಸ್ಟರ್ ದಿವ್ಯಾ ದೇಶ್ಮುಖ್ ಮತ್ತು ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ಈಗಾಗಲೇ ಸೋಲಿಸಿದ್ದಾರೆ.
ಕೊನೆರು ಹಂಪಿ ಗುರುವಾರ ಸೆಮಿಫೈನಲ್ ನಲ್ಲಿ ಲೇ ಟಿಂಗ್ ಜೀಯನ್ನು ಸೋಲಿಸಿದ್ದಾರೆ. 38 ವರ್ಷದ ಹಂಪಿಗೆ ಇದು ಚೊಚ್ಚಲ ವಿಶ್ವಕಪ್ ಫೈನಲ್ ಆಗಿದೆ. ಅವರು ಈಗಾಗಲೇ 2026ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾರೆ.
ಫೈನಲ್ ನಲ್ಲಿ ಅವರು 19 ವರ್ಷದ ದಿವ್ಯಾ ದೇಶ್ಮುಖ್ರನ್ನು ಎದುರಿಸಲಿದ್ದಾರೆ. ನಾಗಪುರದ ದಿವ್ಯಾ 15ನೇ ಶ್ರೇಯಾಂಕದೊಂದಿಗೆ ಈ ಪಂದ್ಯಾವಳಿಯನ್ನು ಪ್ರವೇಶಿಸಿದ್ದಾರೆ. ಆದರೆ, ಅವರು ತನ್ನೆದುರು ಬಂದ ಎಲ್ಲಾ ಉನ್ನತ ರ್ಯಾಂಕಿಂಗ್ ನ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.







