ಕೊರಿಯಾ ಓಪನ್: ಸಾತ್ವಿಕ್-ಚಿರಾಗ್ ಶೆಟ್ಟಿ ಚಾಂಪಿಯನ್

ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್, ಫೋಟೊ: Twitter
ಹೊಸದಿಲ್ಲಿ: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರವಿವಾರ ನಡೆದ ಪುರುಷರ ಡಬಲ್ಸ್ ಫೈನಲ್ ನಲ್ಲಿ ವಿಶ್ವದ ನಂ.1 ಜೋಡಿ ಫಜಾರ್ ಆಲ್ಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ಅರ್ಡಿಯಾಂಟೊರನ್ನು ಮಣಿಸಿದ ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಇಂಡೋನೇಶ್ಯದ ಆಲ್ಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ಅರ್ಡಿಯಾಂಟೊರನ್ನು 17-21, 21-13, 21-14 ಗೇಮ್ ಗಳ ಅಂತರದಿಂದ ಸೋಲಿಸಿದರು.
ಶನಿವಾರ ವಿಶ್ವ ನಂಬರ್ ಎರಡನೇ ಚೀನೀ ಜೋಡಿ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧದ ನೇರ ಗೇಮ್ ಗಳ ಗೆಲುವಿನ ನಂತರ ಸಾತ್ವಿಕ್ ಹಾಗೂ ಚಿರಾಗ್ ಫೈನಲ್ ಗೆ ಪ್ರವೇಶಿಸಿದ್ದಾರೆ. ವಿಶ್ವದ ಮೂರನೇ ರ್ಯಾಂಕಿನ ಭಾರತೀಯ ಜೋಡಿ ಜಿನ್ನಮ್ ಸ್ಟೇಡಿಯಂನಲ್ಲಿ ನಡೆದ 40 ನಿಮಿಷಗಳ ಸೆಮಿ ಫೈನಲ್ ನಲ್ಲಿ ಎರಡನೇ ಶ್ರೇಯಾಂಕಿತ ಚೀನೀಯರ ವಿರುದ್ಧ 21-15, 24-22 ಅಂತರದ ಜಯ ಸಾಧಿಸಿತು.
ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಈ ವರ್ಷ ಇಂಡೋನೇಷ್ಯಾ ಸೂಪರ್ 1000 ಹಾಗೂ ಸ್ವಿಸ್ ಓಪನ್ ಸೂಪರ್ 500 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಇದೀಗ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.