ಕೊರಿಯಾ ಓಪನ್: ಸಾತ್ವಿಕ್ -ಚಿರಾಗ್ ಜೋಡಿ ಸೆಮಿ ಫೆನಲ್ ಗೆ ಲಗ್ಗೆ

ಸಾತ್ವಿಕ್- ಚಿರಾಗ್| Photo : BAI Media
ಹೊಸದಿಲ್ಲಿ: ಭಾರತದ ಸ್ಟಾರ್ ಶಟ್ಲರ್ ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೊರಿಯಾದಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಸೂಪರ್-500 ಟೂರ್ನಮೆಂಟ್ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ವಿಶ್ವದ ನಂ.3ನೇ ಭಾರತದ ಜೋಡಿ ಶುಕ್ರವಾರ ಕೇವಲ 40 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಡಬಲ್ಸ್ನ ಕ್ವಾರ್ಟರ್ ಫೈನಲ್ ನಲ್ಲಿ ತನ್ನ ಕೌಶಲ್ಯ ಹಾಗೂ ಟೀಮ್ ವರ್ಕ್ ಪ್ರದರ್ಶಿಸಿ 21-14, 21-17 ಗೇಮ್ ಗಳ ಅಂತರದಿಂದ ಜಪಾನ್ ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಶಿ ಅವರನ್ನು ಮಣಿಸಿತು.
ಸಾತ್ವಿಕ್ ಹಾಗೂ ಚಿರಾಗ್ ತಮ್ಮ ಎದುರಾಳಿಗಳ ವಿರುದ್ಧ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದರು. ಮೂರನೇ ಶ್ರೇಯಾಂಕದ ಸಾತ್ವಿಕ್ ಹಾಗೂ ಚಿರಾಗ್ ಸೆಮಿ ಫೈನಲ್ ನಲ್ಲಿ ಚೀನಾದ ದ್ವಿತೀಯ ಶ್ರೇಯಾಂಕದ ವೀ ಕೆಂಗ್ ಲಿಯಾಂಗ್ ಹಾಗೂ ಚಾಂಗ್ ವಾಂಗ್ರನ್ನು ಎದುರಿಸಲಿದ್ದಾರೆ. ಕೆಂಗ್ ಲಿಯಾಂಗ್ ಹಾಗೂ ಚಾಂಗ್ ವಾಂಗ್ ಹಾಲಿ ವಿಶ್ವ ಚಾಂಪಿಯನ್ ಗಳಾಗಿದ್ದಾರೆ.
ಭಾರತದ ಇತರ ಆಟಗಾರರಾದ ಪಿ.ವಿ. ಸಿಂಧು, ಎಚ್.ಎಸ್. ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ನಿರ್ಗಮನದ ಹಿನ್ನೆಲೆಯಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಟೂರ್ನಮೆಂಟ್ ನಲ್ಲಿ ಭಾರತದ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಕಳೆದ ತಿಂಗಳು ಇಂಡೋನೇಶ್ಯ ಓಪನ್ ಸೂಪರ್-100 ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಸಾತ್ವಿಕ್ ಹಾಗೂ ಚಿರಾಗ್ ಮತ್ತೊಮ್ಮೆ ಪರಾಕ್ರಮ ಹಾಗೂ ದೃಢತೆಯನ್ನು ಸಾಬೀತುಪಡಿಸಿ ಸೆಮಿ ಫೈನಲ್ ನಲ್ಲಿ ಅರ್ಹವಾಗಿಯೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಥಿರ ಪ್ರದರ್ಶನ ಹಾಗೂ ಆಟದಲ್ಲಿನ ನಿರ್ಣಾಯಕ ಕ್ಷಣಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಮರ್ಥ್ಯವು ಸಾತ್ವಿಕ್ ಹಾಗೂ ಚಿರಾಗ್ರನ್ನು ಕ್ವಾರ್ಟರ್ ಫೈನಲ್ ಗೆ ತಲುಪಿಸಿದೆ.