ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಮಧ್ಯಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಪುತ್ರಿ ಕ್ರಾಂತಿ ಗೌಡ್

ಕ್ರಾಂತಿ ಗೌಡ್ | PC : X
ಭೋಪಾಲ್, ಜು.23: ತಾನಾಡಿರುವ 4ನೇ ಏಕದಿನ ಪಂದ್ಯದಲ್ಲೇ 21ರ ಹರೆಯದ ಕ್ರಾಂತಿ ಗೌಡ್ ಅಮೋಘ ಪ್ರದರ್ಶನ ನೀಡಿ ಭಾರತ ಕ್ರಿಕೆಟ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ಕ್ರಾಂತಿಯ(6-52)ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಭಾರತವು ಮಂಗಳವಾರ ರಾತ್ರಿ ಇಂಗ್ಲೆಂಡ್ ತಂಡವನ್ನು 13 ರನ್ಗಳಿಂದ ಸೋಲಿಸಿದೆ.
ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ತನ್ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪ್ರತಿಭಾವಂತ ಯುವ ಆಟಗಾರ್ತಿ ಕ್ರಾಂತಿಯೊಂದಿಗೆ ಹಂಚಿಕೊಂಡರು. ಹೃದಯಸ್ಪರ್ಶಿ ಸಂದೇಶದೊಂದಿಗೆ ಹಸ್ತಾಕ್ಷರವಿರುವ ಚೆಂಡನ್ನು ಕ್ರಾಂತಿಗೆ ಉಡುಗೊರೆ ನೀಡಿದರು.
ಕ್ರಾಂತಿ ಮಧ್ಯಪ್ರದೇಶದ ಛತ್ತರ್ಪುರದ ಘುವಾರ ಎಂಬ ಸಣ್ಣ ಹಳ್ಳಿಯಿಂದ ಬಂದವರು. 6 ಮಂದಿ ಒಡಹುಟ್ಟಿದವರ ಪೈಕಿ ಒಬ್ಬರಾಗಿರುವ ಕ್ರಾಂತಿ ಅವರ ತಂದೆ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ.
‘‘ನಾನು ಆಕೆಗೆ 2017ರಿಂದ ತರಬೇತಿ ನೀಡುತ್ತಿರುವೆ. ಆಕೆಯ ತಂದೆ ಇಲ್ಲಿಗೆ ಕರೆ ತಂದರು. ಆಕೆ ಹಳ್ಳಿಯ ಹುಡುಗಿಯರೊಂದಿಗೆ ಕ್ರಿಕೆಟ್ ಆಡುತ್ತಿದ್ದಳು. ಪ್ರಾಕ್ಟೀಸ್ ಪಂದ್ಯದಲ್ಲಿ ಆಕೆಯ ಬೌಲಿಂಗ್ ವೀಕ್ಷಿಸಿದ ನಂತರ ಛತ್ತರ್ಪುರದ ನನ್ನ ಅಕಾಡಮಿಗೆ ಸೇರಲು ಸೂಚಿಸಿದ್ದೆ. ಕೆಲವು ದಿನಗಳ ನಂತರ ಛತ್ತರ್ಪುರದಲ್ಲಿ ಆಕೆಗೆ ತಂಗಲು ಕಷ್ಟವಾಯಿತು. ಆಕೆ ಆರ್ಥಿಕ ಸಂಕಷ್ಟದಲ್ಲಿದ್ದಳು. ನಾನು ಆಕೆಯ ಕೋಚಿಂಗ್ ಶುಲ್ಕವನ್ನು ಮನ್ನಾ ಮಾಡಿದೆ. ಶೂಗಳು ಹಾಗೂ ಬ್ಯಾಟ್ ಸಹಿತ ಎಲ್ಲವನ್ನು ನೀಡಿದೆ. ನನ್ನ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಇರುವಂತೆ ಹೇಳಿದ್ದೆ. ನಂತರ ಆಕೆ ತನ್ನ ಸ್ನೇಹಿತೆಯರೊಂದಿಗೆ ಇದ್ದಳು’’ ಎಂದು ಕ್ರಾಂತಿಯ ಬಾಲ್ಯದ ಕೋಚ್ ರಾಜೀವ್ ಬಿಲ್ತಾರೆ ಹೇಳಿದ್ದಾರೆ.
ಕ್ರಾಂತಿ ಗೌಡ್ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 15.11ರ ಸರಾಸರಿಯಲ್ಲಿ ಒಟ್ಟು 9 ವಿಕೆಟ್ಗಳನ್ನು ಪಡೆದಿದ್ದಾರೆ. ಮಧ್ಯಪ್ರದೇಶದ ಎಲ್ಲ ವಯೋಮಾನದ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರುವ ಕ್ರಾಂತಿ ಕಳೆದ ವರ್ಷ 4 ವಿಕೆಟ್ ಗೊಂಚಲು ಪಡೆದು ಮಧ್ಯಪ್ರದೇಶ ತಂಡವು ಬಂಗಾಳವನ್ನು ಸೋಲಿಸಿ ನ್ಯಾಶನಲ್ ವುಮೆನ್ಸ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆಲ್ಲುವಲ್ಲಿ ನೆರವಾಗಿದ್ದರು.







