ಕೆಎಸ್ಸಿಎ ಅಧ್ಯಕ್ಷರಾಗಿ ವೆಂಕಟೇಶ ಪ್ರಸಾದ್: ಅಧಿಕೃತ ಘೋಷಣೆಯಷ್ಟೇ ಬಾಕಿ

ವೆಂಕಟೇಶ್ ಪ್ರಸಾದ್ | Photo Credit : x
ಬೆಂಗಳೂರು, ನ.25: ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ ಪ್ರಸಾದ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್ಸಿಎ)ನೂತನ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಇನ್ನೋರ್ವ ಅಭ್ಯರ್ಥಿ ಸಲ್ಲಿಸಿರುವ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಪ್ರಸಾದ್ ಸ್ಪರ್ಧೆಯಲ್ಲಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಡಿಸೆಂಬರ್ 7ರಂದು ಕೆಎಸ್ಸಿಎ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ನವೆಂಬರ್ 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.
ಅಧ್ಯಕ್ಷ ಹುದ್ದೆಗಾಗಿ ವೆಂಕಟೇಶ ಪ್ರಸಾದ್ ಹಾಗೂ ದಿ ಪ್ರಿಂಟರ್ಸ್(ಮೈಸೂರು)ಪ್ರೈ.ಲಿ.ನಿರ್ದೇಶಕರಾದ ಕೆ.ಎನ್. ಶಾಂತ ಕುಮಾರ್ ಇಬ್ಬರು ಅಭ್ಯರ್ಥಿಗಳಾಗಿದ್ದರು. ಸೋಮವಾರ ನಾಮಪತ್ರದ ಪರಿಶೀಲನೆಯ ವೇಳೆ ಶಾಂತಕುಮಾರ್ ಅವರ ನಾಮಪತ್ರ ಅಸಿಂಧು ಎಂದು ಪ್ರಕಟಿಸಲಾಯಿತು. ವೆಂಕಟೇಶ ಪ್ರಸಾದ್ ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿದ್ದು, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಟೀಮ್ ಗೇಮ್ ಚೇಂಜರ್ಸ್’ ಬಣದ ವೆಂಕಟೇಶ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಬುಧವಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
ವೆಂಕಟೇಶ ಪ್ರಸಾದ್ ಈ ಹಿಂದೆ 2010ರಿಂದ 2013ರ ತನಕ ಕೆಎಸ್ಸಿಎ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇದೀಗ 12 ವರ್ಷಗಳ ನಂತರ ಕೆಎಸ್ಸಿಎಗೆ ಮರಳಿದ್ದಾರೆ. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದು, ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು.
ಕಾರ್ಯದರ್ಶಿ ಹುದ್ದೆಗೆ ಕೆಎಸ್ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಅವರ ನಾಮಪತ್ರವನ್ನು ತಾಂತ್ರಿಕ ಕಾರಣದಿಂದಾಗಿ ತಿರಸ್ಕೃರಿಸಲಾಗಿದ್ದು, ಇದು ‘ಟೀಮ್ ಗೇಮ್ ಚೇಂಜರ್ಸ್’ಗೆ ಹಿನ್ನಡೆಯಾಗಿದೆ.
ಕೆಎಸ್ಸಿಎ ಮಾಜಿ ಖಜಾಂಚಿ ಇ.ಎಸ್.ಜೈರಾಮ್ ಹಾಗೂ ಕೆಎಸ್ಸಿಎ ಮಾಜಿ ಕಾರ್ಯದರ್ಶಿ ಸಂತೋಷ್ ಮೆನನ್(ಇಬ್ಬರೂ ಟೀಮ್ ಬ್ರಿಜೇಶ್ ಬಣ)ಹಾಗೂ ಭಾರತದ ಮಾಜಿ ಬ್ಯಾಟರ್ ಸುಜಿತ್ ಸೋಮಸುಂದರ್ (ಟೀಮ್ ಗೇಮ್ ಚೇಂಜರ್ಸ್)ಅವರು ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಅರ್ಹರೆಂದು ಪರಿಗಣಿಸಲಾಗಿದೆ.







