ಟೆಸ್ಟ್ ಸರಣಿಯಲ್ಲಿ ಒಂದೂ ಪಂದ್ಯವನ್ನಾಡದ ಕುಲದೀಪ್, ಅರ್ಷದೀಪ್, ಅಭಿಮನ್ಯು

ಕುಲದೀಪ್, ಅರ್ಷದೀಪ್ | PTI
ಲಂಡನ್, ಜು.31: ದ ಓವಲ್ ನಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಶುಭಮನ್ ಗಿಲ್ ಬಳಗದ ಅಂತಿಮ-11ರ ಆಯ್ಕೆಯು ಎಲ್ಲರ ಗಮನ ಸೆಳೆದಿದೆ.
ಮೂವರು ಆಟಗಾರರಾದ-ಕುಲದೀಪ್ ಯಾದವ್,ಅರ್ಷದೀಪ್ ಸಿಂಗ್ ಹಾಗೂ ಅಭಿಮನ್ಯು ಈಶ್ವರನ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ.
ಪ್ರಸಕ್ತ ಸರಣಿಗಿಂತ ಮೊದಲು ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಎಡಗೈ ಸ್ಪಿನ್ನರ್ ಕುಲದೀಪ್ 5ನೇ ಟೆಸ್ಟ್ ಪಂದ್ಯದಲ್ಲಿ ಆಡುವ ನಿರೀಕ್ಷೆ ಇತ್ತು. ಜೊತೆಯಾಟವನ್ನು ಮುರಿಯುವ ಅವರ ಸಾಮರ್ಥ್ಯವು ಅವರನ್ನು ಪ್ರಬಲ ಸ್ಪರ್ಧಿಯನ್ನಾಗಿತ್ತು. ಆದರೆ, ಭಾರತ ತಂಡವು ಆಲ್ ರೌಂಡರ್ ಆಯ್ಕೆಯತ್ತ ಒಲವು ತೋರಿದೆ. ಸರಣಿಯುದ್ದಕ್ಕೂ ವೇಗದ ಬೌಲಿಂಗ್ ದಾಳಿಯನ್ನೇ ಹೆಚ್ಚು ನೆಚ್ಚಿಕೊಂಡಿದೆ. ಹೀಗಾಗಿ ಕುಲದೀಪ್ ಅವರು ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿಲ್ಲ.
ಇಂಗ್ಲೆಂಡ್ ಪ್ರವಾಸದ ವೇಳೆ ಗಾಯದ ಸಮಸ್ಯೆಯನ್ನು ಎದುರಿಸುತ್ತಾ ಬಂದಿರುವ ಅರ್ಷದೀಪ್ ಸಿಂಗ್, ಫಿಟ್ನೆಸ್ ಪಡೆದ ನಂತರ ಐದನೇ ಟೆಸ್ಟ್ ಪಂದ್ಯದಲ್ಲಿ ಆಡುವ ರೇಸ್ನಲ್ಲಿದ್ದರು. ಆದರೆ ಮುಹಮ್ಮದ್ ಸಿರಾಜ್, ಪ್ರಸಿದ್ದ ಕೃಷ್ಣ ಹಾಗೂ ಆಕಾಶ್ ದೀಪ್ ಗೆ ಆದ್ಯತೆ ನೀಡಿದ ಪರಿಣಾಮ ಎಡಗೈ ವೇಗಿ ಕೊನೆಗೂ ಚೊಚ್ಚಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.
ಅಗ್ರ ಸರದಿಯ ಬ್ಯಾಟರ್ ಅಭಿಮನ್ಯು ಈಶ್ವರನ್ ಕೂಡ ಒಂದು ಪಂದ್ಯವನ್ನು ಆಡದೆ ನಿರಾಶೆಗೊಂಡಿದ್ದಾರೆ. ಭಾರತ ತಂಡದ ವಿದೇಶಿ ಪ್ರವಾಸದ ವೇಳೆ ಸತತವಾಗಿ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಈಶ್ವರನ್ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕುಲದೀಪ್ ರನ್ನು ಆಡಿಸದೆ ಇರುವುದು ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ದ ಓವಲ್ ನ ವಾತಾವರಣವು ಕುಲದೀಪ್ರನ್ನು ಆಡುವ 11ರ ಬಳಗದಿಂದ ಹೊರಗಿಡಲು ಪ್ರಮುಖ ಕಾರಣವಾಗಿದೆ. 2023ರ ಮೇ ನಂತರ ಈ ಮೈದಾನದಲ್ಲಿ 22 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಾಗಿದೆ. ಈ ಎಲ್ಲ ಪಂದ್ಯಗಳಲ್ಲಿ ವೇಗಿಗಳು 617 ವಿಕೆಟ್ ಗಳನ್ನು ಪಡೆದಿದ್ದಾರೆ. ಸ್ಪಿನ್ನರ್ ಗಳು ಕೇವಲ 79 ವಿಕೆಟ್ ಪಡೆಯುವಲ್ಲಿ ಶಕ್ತರಾಗಿದ್ದಾರೆ.
ಈ ವರ್ಷ ಈ ಪ್ರವೃತ್ತಿಯು ಏಕಪಕ್ಷೀಯವಾಗಿದ್ದು, 150 ವಿಕೆಟ್ ಗಳ ಪೈಕಿ 131 ವಿಕೆಟ್ ಗಳು ವೇಗದ ಬೌಲರ್ ಗಳ ಪಾಲಾಗಿದೆ.
ಭಾರತ ತಂಡವು ರವೀಂದ್ರ ಜಡೇಜರನ್ನು ಮುಖ್ಯ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದು, ವಾಶಿಂಗ್ಟನ್ ಸುಂದರ್ ಅವರು ಜಡೇಜಗೆ ಸಾಥ್ ನೀಡಲಿದ್ದಾರೆ. ಈ ಇಬ್ಬರು ಬ್ಯಾಟಿಂಗ್ ನಲ್ಲೂ ಕೊಡುಗೆ ನೀಡುತ್ತಿದ್ದಾರೆ. ದ ಓವಲ್ ಪಿಚ್ ವೇಗದ ಬೌಲರ್ ಗಳಿಗೆ ನೆರವಾಗುವ ನಿರೀಕ್ಷೆ ಇರುವ ಕಾರಣ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಕುಲದೀಪ್ಗೆ ಇಡೀ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಪಡೆದಿಲ್ಲ. ತಂಡದ ರಣನೀತಿ ಹಾಗೂ ಪಿಚ್ ಪರಿಸ್ಥಿತಿಯ ಕಾರಣಕ್ಕೆ ಕುಲದೀಪ್ ಮತ್ತೊಮ್ಮೆ ಕಡೆಗಣಿಸಲ್ಪಟ್ಟಿದ್ದಾರೆ.







