ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಆಡುವುದು ದೊಡ್ಡ ಗೌರವ: ಕುಲದೀಪ್ ಯಾದವ್

ಕುಲದೀಪ್ ಯಾದವ್ | Photo Credit : PTI
ಹೊಸದಿಲ್ಲಿ: ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಆಡುವುದು ದೊಡ್ಡ ಗೌರವ ಎಂದ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ಕಠಿಣ ಸ್ಪರ್ಧೆಯ ನಡುವೆಯೂ ಆಕ್ರಮಣಕಾರಿ ಮನೋಭಾವವನ್ನು ಉಳಿಸಿಕೊಂಡಿರುವುದರಿಂದ ತಂಡದಲ್ಲಿ ಉಳಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಐದು ಪಂದ್ಯಗಳ ಟಿ-20 ಸರಣಿಯ ನಡುವೆಯೇ ದಕ್ಷಿಣ ಆಫ್ರಿಕಾ ತಂಡದೆದುರಿನ ಟೆಸ್ಟ್ ಸರಣಿಗೆ ಸಿದ್ಧಗೊಳ್ಳಲು ತವರಿಗೆ ಮರಳಿದ್ದ ಕುಲದೀಪ್ ಯಾದವ್, ಕೋಲ್ಕತ್ತಾದಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡದೆದುರು ಪರಾಭವಗೊಂಡರೂ, ಪಂದ್ಯದಲ್ಲಿ ಒಟ್ಟು 4 ವಿಕೆಟ್ ಗಳನ್ನು ಪಡೆಯುವ ಮೂಲಕ, ಉತ್ತಮ ಪ್ರದರ್ಶನ ನೀಡಿದ್ದರು.
ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 342 ವಿಕೆಟ್ ಗಳನ್ನು ಪಡೆದಿರುವ ಕುಲದೀಪ್ ಯಾದವ್ ರ ಸಾಮರ್ಥ್ಯವನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಲ್ಲದಿದ್ದರೂ, ಟೆಸ್ಟ್ ಕ್ರಿಕೆಟ್ ನಲ್ಲಾದರೂ ಬೇಡಿಕೆಯ ಆಟಗಾರನಾಗಿ ಉಳಿಯಲು ಅವರು ದೈಹಿಕ ಸಾಮರ್ಥ್ಯದತ್ತ ತಮ್ಮ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಿದ್ದಾರೆ.





