ಕುಲದೀಪ್ ಯಾದವ್ ಕೈಚಳಕ | ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ 247/6

Photo Credit : PTI
ಗುವಾಹಟಿ, ನ.22: ಸ್ಪಿನ್ನರ್ ಕುಲದೀಪ್ ಯಾದವ್(3-48)ಅವರ ಕೈಚಳಕದ ನೆರವಿನಿಂದ ಟೀಮ್ ಇಂಡಿಯಾ ಶನಿವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು 6 ವಿಕೆಟ್ ಗಳ ನಷ್ಟಕ್ಕೆ 247 ರನ್ ಗೆ ನಿಯಂತ್ರಿಸಿದೆ.
ಭಾರತದ ನೆಲದಲ್ಲಿ 25 ವರ್ಷಗಳಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲುವ ಕನಸು ಕಾಣುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟ್ರಿಸ್ಟನ್ ಸ್ಟಬ್ಸ್(49 ರನ್, 112 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ನಾಯಕ ಟೆಂಬಾ ಬವುಮಾ(41 ರನ್, 92 ಎಸೆತ, 5 ಬೌಂಡರಿ)ಮೂರನೇ ವಿಕೆಟ್ಗೆ 84 ರನ್ ಗಳಿಸಿ ತಂಡವು ಮೊದಲ ದಿನದಾಟದಂತ್ಯಕ್ಕೆ ಗೌರವಾರ್ಹ ಮೊತ್ತ ಕಲೆ ಹಾಕಲು ನೆರವಾದರು.
ದಕ್ಷಿಣ ಆಫ್ರಿಕಾದ ಎಲ್ಲ ಬ್ಯಾಟರ್ಗಳು ಉತ್ತಮ ಆರಂಭ ಪಡೆದಿದ್ದರು. ಆದರೆ ಯಾರೂ ಕೂಡ ಅರ್ಧಶತಕವನ್ನು ಗಳಿಸಲಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು 30 ರನ್ ಅಂತರದಿಂದ ಗೆದ್ದುಕೊಂಡು 1-0 ಮುನ್ನಡೆ ಸಾಧಿಸಿದೆ.
ಸ್ಟಬ್ಸ್ ವಿಕೆಟನ್ನು ಉರುಳಿಸಿದ ಕುಲದೀಪ್ ಅರ್ಧಶತಕವನ್ನು ನಿರಾಕರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಬವುಮಾಗೆ ಪೆವಿಲಿಯನ್ ಹಾದಿ ತೋರಿಸಿದರು.
ಎಡಗೈ ಸ್ಪಿನ್ನರ್ ಕುಲದೀಪ್(3-48) ವಿಯಾನ್ ಮುಲ್ದರ್(13 ರನ್)ವಿಕೆಟನ್ನು ಕಬಳಿಸಿದರೆ, ಮುಹಮ್ಮದ್ ಸಿರಾಜ್ ಅವರು ಎರಡನೇ ಹೊಸ ಚೆಂಡಿನಲ್ಲಿ ಟೋನಿ ಡಿ ರೆರ್ಝಿ(28 ರನ್)ವಿಕೆಟನ್ನು ಉರುಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನಷ್ಟು ಒತ್ತಡ ಹೇರಿದರು.
ಮಂದ ಬೆಳಕಿನಿಂದಾಗಿ 81.5 ಓವರ್ಗಳ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಗಿದ್ದು ಎಡಗೈ ಬ್ಯಾಟರ್ ಎಸ್. ಮುತ್ತುಸ್ವಾಮಿ(25 ರನ್)ಹಾಗೂ ವಿಕೆಟ್ಕೀಪರ್-ಬ್ಯಾಟರ್ ಕೈಲ್ ವೆರ್ರೆನ್ನೆ(1 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಏಡೆನ್ ಮರ್ಕ್ರಮ್(38 ರನ್, 81 ಎಸೆತ, 5 ಬೌಂಡರಿ)ಹಾಗೂ ರಯಾನ್ ರಿಕೆಲ್ಟನ್(35 ರನ್, 82 ಎಸೆತ, 5 ಬೌಂಡರಿ)ಆರಂಭಿಕ ವಿಕೆಟ್ಗೆ 82 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮರ್ಕ್ರಮ್ರನ್ನು ಕ್ಲೀನ್ಬೌಲ್ಡ್ ಮಾಡಿದ ಜಸ್ಪ್ರಿತ್ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಮರ್ಕ್ರಮ್ ಔಟಾದ ಬೆನ್ನಿಗೆ ರಿಕೆಲ್ಟನ್ ಅವರು ಕುಲದೀಪ್ಗೆ ವಿಕೆಟ್ ಒಪ್ಪಿಸಿದರು.
ಮೂರನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಸ್ಟಬ್ಸ್ ಹಾಗೂ ಬವುಮಾ ಭಾರತೀಯ ಸ್ಪಿನ್ನರ್ಗಳ ವಿರುದ್ಧ ಎಚ್ಚರಿಕೆಯ ಆಟವಾಡಿ ನಿರಂತರ ಬೌಂಡರಿಗಳ ಮೂಲಕ ಇನಿಂಗ್ಸ್ ಬೆಳೆಸಿದರು.
ಜಡೇಜ ಫಾರ್ಮ್ ನಲ್ಲಿರುವ ಬವುಮಾ ವಿಕೆಟನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಬವುಮಾ ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಏಕೈಕ ಆಟಗಾರನಾಗಿದ್ದರು.
ಜಡೇಜ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಸ್ಟಬ್ಸ್ ಇನಿಂಗ್ಸ್ ಮತ್ತಷ್ಟು ಹಿಗ್ಗಿಸುವ ಪ್ರಯತ್ನದಲ್ಲಿದ್ದರು. ಆದರೆ ಅವರು ಕುಲದೀಪ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾ ತಂಡವು 201 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಆರನೇ ವಿಕೆಟ್ಗೆ 45 ರನ್ ಸೇರಿಸಿದ ಟೋನಿ ಡಿ ರೆರ್ಝಿ ಹಾಗೂ ಮುತ್ತುಸ್ವಾಮಿ ತಂಡವನ್ನು ಆಧರಿಸಿದರು. ರೆರ್ಝಿ ವಿಕೆಟನ್ನು ಪಡೆದ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು.
ಪಂದ್ಯವು ನಿಗದಿತ ಸಮಯಕ್ಕಿಂತ 30 ನಿಮಿಷ ಮೊದಲೇ ಆರಂಭವಾಗಿದ್ದು, ಲಂಚ್ ವಿರಾಮಕ್ಕಿಂತ ಮೊದಲೇ ಟೀ ವಿರಾಮ ಪಡೆಯಲಾಯಿತು. ಇದೇ ಮೊದಲ ಬಾರಿ ಬರ್ಷಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ದಿನ 15,000ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಆಗಮಿಸಿದ್ದರು.
ನಿರೀಕ್ಷೆಯಂತೆಯೇ ಭಾರತ ತಂಡವು ಶುಭಮನ್ ಗಿಲ್ ಬದಲಿಗೆ ಸಾಯಿ ಸುದರ್ಶನ್, ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ರೆಡ್ಡಿ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿತು. ದಕ್ಷಿಣ ಆಫ್ರಿಕಾ ಅಚ್ಚರಿಯ ಹೆಜ್ಜೆ ಇಟ್ಟಿದ್ದು, ಆಲ್ರೌಂಡರ್ ಕಾರ್ಬಿನ ಬಾಷ್ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಎಸ್.ಮುತ್ತುಸ್ವಾಮಿಗೆ ಮಣೆ ಹಾಕಿತು.
ಇತ್ತೀಚೆಗೆ ಪಾಕಿಸ್ತಾನ ತಂಡದ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು 2000ರ ನಂತರ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.







