ಇಂಗ್ಲೆಂಡ್ನ ದೇಶೀಯ ಕ್ರಿಕೆಟ್ ಆಡಲು ಮುಂದಾದ ಕುಲದೀಪ್ ಯಾದವ್

ಕುಲದೀಪ್ ಯಾದವ್ | Photo Credit : PTI
ಹೊಸದಿಲ್ಲಿ, ಜು.22: ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಇಂಗ್ಲಿಷ್ ದೇಶೀಯ ಋತುವಿನ ಉಳಿದ ಪಂದ್ಯಗಳಿಗೆ ಯಾರ್ಕ್ಶೈರ್ ಪ ಆಡಲು ಸಹಿ ಹಾಕಿದ ವಿದೇಶಿ ಆಟಗಾರನಾಗಿದ್ದಾರೆ. ಎಡಗೈ ಸ್ಪಿನ್ನರ್ ಯಾದವ್ ಅವರು ಸೆಪ್ಟಂಬರ್ನಲ್ಲಿ ಮೂರು ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳನ್ನು ಆಡುವ ಮೊದಲು ಐದು ಏಕದಿನ ಕಪ್ ಪಂದ್ಯಗಳನ್ನು ಆಡಲಿದ್ದಾರೆ.
ಗ್ಲಾಮೊರ್ಗನ್ ವಿರುದ್ಧ ಶುಕ್ರವಾರ 50 ಓವರ್ಗಳ ಪಂದ್ಯವನ್ನಾಡುವ ಮೂಲಕ ಯಾದವ್ ತನ್ನ ಕೌಂಟಿ ಕ್ರಿಕೆಟ್ ಅಭಿಯಾನ ಆರಂಭಿಸಲಿದ್ದಾರೆ.
ಕುಲದೀಪ್ ಅವರು ಇಂಗ್ಲೆಂಡ್ನ ಅತ್ಯಂತ ಐತಿಹಾಸಿಕ ಕೌಂಟಿ ಕ್ಲಬ್ಗೆ ಸೇರಲು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಯಾರ್ಕ್ಶೈರ್ ಕ್ಲಬ್ ಸೇರಲು ನನಗೆ ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಈ ಅವಕಾಶಕ್ಕಾಗಿ ಋಣಿಯಾಗಿದ್ದೇನೆ. ಹೆಮ್ಮೆಯ ಇತಿಹಾಸ ಹೊಂದಿರುವ ಯಾಕ್ಶೈರ್ ಕ್ಲಬ್ ಪ್ರತಿನಿಧಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ಇಂಗ್ಲೆಂಡ್ ವಾತಾವರಣದಲ್ಲಿ ಸ್ವತಃ ಪರೀಕ್ಷೆಗೆ ಒಳಗಾಗಲು ಎದುರು ನೋಡುತ್ತಿರುವೆ’’ ಎಂದು ಕುಲದೀಪ್ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಭಾರತ ತಂಡವು ಈಗಾಗಲೇ ಏಕದಿನ ಸರಣಿಯನ್ನಾಡಿದ್ದು ತಂಡದಲ್ಲಿದ್ದರೂ ಮೂರು ಪಂದ್ಯಗಳಲ್ಲಿ ಕುಲದೀಪ್ ಆಡುವ ಅವಕಾಶವನ್ನು ಪಡೆದಿರಲಿಲ್ಲ.
ಋತುವಿನ ಅಂತ್ಯದಲ್ಲಿ ಸ್ಪಿನ್ನರ್ಗಳು ದೊಡ್ಡ ಪಾತ್ರವಹಿಸುತ್ತಿರುವ ಕಾರಣ ಕುಲದೀಪ್ ಆಗಮನವು ತನ್ನ ಬೌಲಿಂಗ್ ದಾಳಿಯನ್ನು ಬಲಿಷ್ಠಗೊಳಿಸಲಿದೆ ಎಂದು ಯಾರ್ಕ್ಶೈರ್ ತಿಳಿಸಿದೆ.
ಈ ವರ್ಷದ ಕೌಂಟಿ ಕ್ರಿಕೆಟಿಗೆ ಭಾರತೀಯ ಕ್ರಿಕೆಟಿಗರ ಪಟ್ಟಿಗೆ ಕುಲದೀಪ್ ಹೊಸ ಸೇರ್ಪಡೆಯಾಗಿದ್ದಾರೆ. ಯಜುವೇಂದ್ರ ಚಹಾಲ್, ಜಯದೇವ್ ಉನದ್ಕಟ್, ಮಾನವ್ ಸುಥರ್, ಆರ್. ಸಾಯಿ ಕಿಶೋರ್ ಹಾಗೂ ಅಶುತೋಷ್ ಶರ್ಮಾ ಈ ಪಟ್ಟಿಯಲ್ಲಿದ್ದಾರೆ.






