ಕೌಂಟಿ ಚಾಂಪಿಯನ್ಶಿಪ್ ನಲ್ಲಿ 10 ವಿಕೆಟ್ ಗೊಂಚಲು; ಗಂಭೀರ್ ಗೆ ಪ್ರಬಲ ಸಂದೇಶ ರವಾನಿಸಿದ ಕುಲದೀಪ್ ಯಾದವ್

Photo: X/YorkshireCCC
ಹೊಸದಿಲ್ಲಿ, ಸೆ.11: ಕುಲದೀಪ್ ಯಾದವ್ ಭಾರತದ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಎಡಗೈ ಸ್ಪಿನ್ನರ್ ಹೆಡ್ಡಿಂಗ್ಲೆಯಲ್ಲಿ ಗುರುವಾರ ನಡೆದ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಎಸ್ಸೆಕ್ಸ್ ತಂಡದ ವಿರುದ್ಧ ಯಾರ್ಕ್ಶೈರ್ ಪರವಾಗಿ 120 ರನ್ಗೆ 10 ವಿಕೆಟ್ ಗಳನ್ನು ಪಡೆದಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.
ಕುಲದೀಪ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದು, ಮೊದಲ ಇನಿಂಗ್ಸ್ನಲ್ಲಿ 70 ರನ್ಗೆ ನಾಲ್ಕು ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 50 ರನ್ ಗೆ ಆರು ವಿಕೆಟ್ ಗಳನ್ನು ಉರುಳಿಸಿ ಯಾರ್ಕ್ಶೈರ್ ತಂಡಕ್ಕೆ 106 ರನ್ಗಳ ಗೆಲುವು ತಂದುಕೊಟ್ಟಿದ್ದಾರೆ.
ಸ್ಪಿನ್ ಗೆ ನೆರವು ನೀಡಿದ ಪಿಚ್ ನಲ್ಲಿ ಕುಲದೀಪ್ ಬೌಲಿಂಗ್ ನಲ್ಲಿ ಮಿಂಚಿದ್ದಲ್ಲದೆ, ಬ್ಯಾಟಿಂಗ್ ನಲ್ಲಿ 36 ರನ್ ಗಳಿಸಿ ಯಾರ್ಕ್ಶೈರ್ ಮೊತ್ತವನ್ನು 390ಕ್ಕೆ ತಲುಪಿಸಿದ್ದರು.
ಇತ್ತೀಚೆಗೆ ಭಾರತದ ಟೆಸ್ಟ್ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿರುವ ಕುಲದೀಪ್ ಕೌಂಟಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ಪ್ರಬಲ ಸಂದೇಶ ರವಾನಿಸಿದರು. ಶ್ರೀಲಂಕಾ ಟೆಸ್ಟ್ ಪ್ರವಾಸದ ಮೊದಲ ಪಂದ್ಯವನ್ನಾಡಿದ್ದ ಕುಲದೀಪ್ ಸುಮಾರು 25 ಓವರ್ ಬೌಲಿಂಗ್ ಮಾಡಿದ್ದರು.
2017ರಲ್ಲಿ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಕುಲದೀಪ್ ಬಿಳಿ ಚೆಂಡಿನ ಕ್ರಿಕೆಟ್ ನ ಓರ್ವ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕುಲದೀಪ್ ಈ ತನಕ ಕೇವಲ 19 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.






