ವಿಮಾನದಲ್ಲಿ ಆಮ್ಲಜನಕ ಕೊರತೆ: ಗಾಂಬಿಯ ಫುಟ್ಬಾಲ್ ಆಟಗಾರರಿಗೆ ಸಾವಿನ ಭಯ

Photo: newsweek.com
ಬಾಂಜೂಲ್ (ಗಾಂಬಿಯ): ಆಫ್ರಿಕ ಕಪ್ ಆಫ್ ನೇಶನ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಗಾಂಬಿಯ ದೇಶದ ಫುಟ್ಬಾಲ್ ಆಟಗಾರರನ್ನು ಐವರಿ ಕೋಸ್ಟ್ ದೇಶಕ್ಕೆ ಕರೆದೊಯ್ಯುತ್ತಿದ್ದ ವಿಮಾನದಲ್ಲಿ ಆಮ್ಲಜನಕದ ಕೊರತೆ ತಲೆದೋರಿದ ಬಳಿಕ ವಿಮಾನವು ಸ್ವದೇಶಕ್ಕೆ ಮರಳಿರುವ ಘಟನೆ ವರದಿಯಾಗಿದೆ.
‘‘ನಮ್ಮನ್ನು ಸಾವಿನ ಭಯ ಕಾಡಿತು’’ ಎಂಬುದಾಗಿ ತಂಡದ ಆಟಗಾರರು ಮತ್ತು ಸಿಬ್ಬಂದಿ ಬಳಿಕ ಆ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.
ಫುಟ್ಬಾಲ್ ತಂಡವನ್ನು ಹೊತ್ತ ವಿಮಾನವು ಬುಧವಾರ ರಾತ್ರಿ ಗಾಂಬಿಯ ರಾಜಧಾನಿ ಬಾಂಜೂಲ್ನಿಂದ ಆಬಿದ್ಜಾನ್ ಗೆ ಹಾರಾಟ ಆರಂಭಿಸಿದ ಕೇವಲ ಎಂಟು ನಿಮಿಷಗಳಲ್ಲಿ ಹಿಂದಿರುಗಿ ಬಂತು.
‘‘ಆಮ್ಲಜನಕ ಮತ್ತು ಕ್ಯಾಬಿನ್ ನಲ್ಲಿ ವಾಯು ಒತ್ತಡದ ಕೊರತೆಯಿಂದಾಗಿ ವಿಮಾನ ವಾಪಸ್ ಬಂತು” ಎಂದು ಗಾಂಬಿಯದ ಫುಟ್ಬಾಲ್ ಫೆಡರೇಶನ್ ತಿಳಿಸಿದೆ. ಆದರೆ, ವಿಮಾನದಲ್ಲಿದ್ದ ಎಲ್ಲರೂ ‘‘ಉತ್ತಮ ಆರೋಗ್ಯದಲ್ಲಿದ್ದಾರೆ’’ ಎಂದು ಅದು ಹೇಳಿದೆ.
ಬಳಿಕ ತಂಡವು ಗುರುವಾರ ಐವರಿಕೋಸ್ಟ್ ಗೆ ಪ್ರಯಾಣಿಸಿದೆ.‘‘ನಾವು ಸಾಯುತ್ತಿದ್ದೇವೆಯೋ ಎನ್ನುವ ಭಯ ಕಾಡಿತು. 30 ನಿಮಿಷಗಳ ಕಾಲ ಸಾವಿನ ಭಯ ನಮ್ಮನ್ನು ಕಾಡಿತು’’ ಎಂದು ತಂಡದ ಕೋಚ್ ಟಾಮ್ ಸೇಂಟ್ಫೀಟ್ ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಘಟನೆ ನಡೆಯುವ ಮೊದಲು, ಆಟಗಾರರು ಬೋನಸ್ ಪಾವತಿ ವಿಷಯದಲ್ಲಿ ತಮ್ಮ ತಂಡದ ಆಡಳಿತದೊಂದಿಗೆ ಮುನಿಸಿಕೊಂಡಿದ್ದರು. ಇದೇ ವಿಷಯದಲ್ಲಿ, ಪಂದ್ಯಾವಳಿಗೆ ಪ್ರಯಾಣಿಸುವ ಮೊದಲು ಅವರು ತಮ್ಮ ಕೊನೆಯ ತರಬೇತಿಯನ್ನು ಬಹಿಷ್ಕರಿಸಿದ್ದರು. ಪಂದ್ಯಾವಳಿಗೆ ಅರ್ಹತೆ ಗಳಿಸಿರುವುದಕ್ಕಾಗಿ ತಮಗೆ ಬೋನಸ್ ನೀಡಬೇಕು ಎಂಬುದಾಗಿ ಆಟಗಾರರು ಒತ್ತಾಯಿಸುತ್ತಿದ್ದರು. ಈಗ ಬೋನಸ್ ನೀಡಲಾಗಿದೆ ಎಂದು ತಂಡದ ನಾಯಕ ಉಮರ್ ಕಾಲಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.







