ಮೂರು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಯಶಸ್ಸಿಗೆ ಕಾರಣರಾಗಿದ್ದ ಲಹಿರು ತಿರಿಮನ್ನೆ ಕ್ರಿಕೆಟ್‌ಗೆ ಗುಡ್‌ಬೈ

ಕೊಲಂಬೊ, ಜು.23: ಶ್ರೀಲಂಕಾದ ಹಿರಿಯ ಬ್ಯಾಟ್ಸ್‌ಮನ್ ಲಹಿರು ತಿರಿಮನ್ನೆ ತಮ್ಮ 12 ವರ್ಷಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ತನ್ನ ವೃತ್ತಿಬದುಕಿನುದ್ದಕ್ಕೂ 33ರ ಹರೆಯದ ತಿರಿಮನ್ನೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದು, 2010ರಲ್ಲಿ ಕ್ರಿಕೆಟಿಗೆ ಪಾದಾರ್ಪಣೆಗೈದ ನಂತರ ಲಂಕೆಯ ಪರ 44 ಟೆಸ್ಟ್, 127 ಏಕದಿನ ಹಾಗೂ 26 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.
ಐಸಿಸಿ ಆಯೋಜಿತ ಮೂರು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಲಂಕೆಯ ಯಶಸ್ಸಿಗೆ ಕಾರಣೀಕರ್ತರಾಗಿದ್ದ ತಿರಿಮನ್ನೆ 2014ರ ಆವೃತ್ತಿಯಲ್ಲಿ ಶ್ರೀಲಂಕಾ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಪ್ರಮುಖ ಕೊಡುಗೆ ನೀಡಿದ್ದರು. ಅಲ್ಲದೆ ಹಲವು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ ಪಡೆದಿದ್ದರು. ಐದು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ನಾಯಕನಾಗಿ ಮುನ್ನಡೆಸುವ ಅವಕಾಶವನ್ನು ತಿರಿಮನ್ನೆ ಪಡೆದಿದ್ದರು. ನಾಯಕತ್ವದ ಕೌಶಲ್ಯದ ಮೂಲಕ ತನ್ನ ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಯಲ್ಲಿ ಬದ್ಧತೆ ವ್ಯಕ್ತಪಡಿಸಿದ್ದರು.
"ಆಟಗಾರನಾಗಿ ನಾನು ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸಿರುವೆ. ಕ್ರಿಕೆಟ್‌ಗೆ ನಾನು ಗೌರವ ನೀಡುವೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿರುವೆ. ನನ್ನ ತಾಯ್ನಾಡಿಗಾಗಿ ನೈತಿಕತೆಯಿಂದ ಕೆಲಸ ಮಾಡಿದ್ದೇನೆ'' ಎಂದು ತಿರಿಮನ್ನೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ತಿರಿಮನ್ನೆ 2022ರ ಮಾರ್ಚ್‌ನಲ್ಲಿ ಶ್ರೀಲಂಕಾದ ಪರ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದರು.ಆಗ ಅವರು ಬೆಂಗಳೂರಿನಲ್ಲಿ ಭಾರತ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ್ದರು. 50 ಓವರ್‌ಗಳ ಪಂದ್ಯದಲ್ಲಿ ಲಂಕೆಯ ಉತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ತಿರಿಮನ್ನೆ 106 ಇನಿಂಗ್ಸ್‌ಗಳಲ್ಲಿ 4 ಶತಕ ಹಾಗೂ 24 ಅರ್ಧಶತಕಗಳ ಸಹಿತ 34.71ರ ಸರಾಸರಿಯಲ್ಲಿ ಒಟ್ಟು 3,194 ರನ್ ಕಲೆ ಹಾಕಿದ್ದರು.