ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ತನಿಖೆಯಿಂದ ವಿಶೇಷ ತನಿಖಾ ತಂಡವನ್ನು ಮುಕ್ತಗೊಳಿಸಿದ ಸುಪ್ರೀಂಕೋರ್ಟ್

Photo: PTI
ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ ಐಟಿ) ವನ್ನು ತನಿಖೆಯಿಂದ ಸೋಮವಾರ ಮುಕ್ತಗೊಳಿಸಿದ ಸುಪ್ರೀಂ ಕೋರ್ಟ್, ಎಸ್ ಐಟಿ ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ ಹಾಗೂ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಹೇಳಿದೆ.
ಈ ಪ್ರಕರಣವು ಅಕ್ಟೋಬರ್ 3, 2021 ರಂದು ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರನ್ನು ಕೊಂದ ಹಿಂಸಾಚಾರದ ಘಟನೆಗೆ ಸಂಬಂಧಿಸಿದೆ.
ಸೋಮವಾರ ಆದೇಶ ಹೊರಡಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ದೀಪಂಕರ್ ದತ್ತಾ ಅವರ ಪೀಠ, ಎಸ್ ಐಟಿಯನ್ನು ಪುನರ್ರಚಿಸುವ ಯಾವುದೇ ಅಗತ್ಯವಿದ್ದಲ್ಲಿ, ಸೂಕ್ತ ಆದೇಶವನ್ನು ಹೊರಡಿಸಲಾಗುವುದು ಎಂದು ಹೇಳಿದೆ.
ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ಉತ್ತರ ಪ್ರದೇಶ ಪೊಲೀಸ್ ಎಸ್ ಐಟಿಯ ತನಿಖೆಯನ್ನು ದಿನನಿತ್ಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನೇಮಿಸಿತ್ತು.
ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಾದ ಎಸ್.ಬಿ .ಶಿರೋಡ್ಕರ್, ದೀಪಿಂದರ್ ಸಿಂಗ್ ಹಾಗೂ ಪದ್ಮಜಾ ಚೌಹಾಣ್ ಎಸ್ ಐಟಿಯ ಭಾಗವಾಗಿದ್ದರು.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಜುಲೈ 11 ರಂದು ಸೆಪ್ಟೆಂಬರ್ 26 ರವರೆಗೆ ವಿಸ್ತರಿಸಿತ್ತು.
2021ರಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿತ್ತು.
ನಾಲ್ವರು ರೈತರ ಮೇಲೆ ಕಾರನ್ನು ಹರಿಸಿ ಸಾಯಿಸಲಾಗಿತ್ತು. ನಂತರ ಕೋಪಗೊಂಡ ರೈತರು ಒಬ್ಬ ಚಾಲಕ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಲ್ಲಿ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದರು,







