ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ; ಸತತ ಸೋಲಿನ ನಂತರ ಕೊನೆಗೂ ಪ್ರಶಸ್ತಿ ಗೆದ್ದ ಲಕ್ಷ್ಯ ಸೇನ್

ಲಕ್ಷ್ಯ ಸೇನ್ | PC : PTI
ಸಿಡ್ನಿ, ನ.23: ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ನಲ್ಲಿ ಜಪಾನ್ ಆಟಗಾರ ಯುಶಿ ಟನಕಾರನ್ನು ನೇರ ಗೇಮ್ಗಳ ಅಂತರದಿಂದ ಮಣಿಸಿರುವ ಭಾರತೀಯ ಶಟ್ಲರ್ ಲಕ್ಷ್ಯ ಸೇನ್ 2025ರ ಋತುವಿನಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದರು.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೇನ್ ಕೇವಲ 38 ನಿಮಿಷಗಳಲ್ಲಿ ಕೊನೆಗೊಂಡಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟನಕಾರನ್ನು 21-15, 21-11 ಗೇಮ್ಗಳ ಅಂತರದಿಂದ ಮಣಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಸವಾಲಿನ ಸಮಯ ಎದುರಿಸಿದ್ದ 24ರ ವಯಸ್ಸಿನ ಸೇನ್ ಇದೀಗ 4,75,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು.
‘‘ನಾನು ಈ ವರ್ಷ ಸಾಕಷ್ಟು ಏರಿಳಿತ ಕಂಡಿದ್ದೇನೆ. ವರ್ಷದ ಆರಂಭದಲ್ಲಿ ಕೆಲವು ಗಾಯದ ಸಮಸ್ಯೆ ಇದ್ದವು. ಆದರೆ ವರ್ಷದುದ್ದಕ್ಕೂ ನನ್ನ ಕಠಿಣ ಪರಿಶ್ರಮ ಮುಂದುವರಿಸಿರುವೆ. ಪ್ರಶಸ್ತಿಯೊಂದಿಗೆ ವರ್ಷವನ್ನು ಕೊನೆಗೊಳಿಸಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದು ಸೇನ್ ಹೇಳಿದರು.
2021ರಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಸೇನ್ 2024ರಲ್ಲಿ ಲಕ್ನೊದಲ್ಲಿ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಟೂರ್ನಿಯಲ್ಲಿ ಕೊನೆಯ ಬಾರಿ ಸೂಪರ್-300 ಪ್ರಶಸ್ತಿಯನ್ನು ಗೆದ್ದಿದ್ದರು. ಅದೇ ವರ್ಷ ಕೆನಡಾ ಓಪನ್ ನಲ್ಲಿ ಪ್ರಶಸ್ತಿ ಜಯಿಸಿದ್ದರು.
ಲಕ್ಷ್ಯ ಸೇನ್ ಈ ವರ್ಷ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದಿರುವ ಭಾರತದ ಎರಡನೇ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ. ಆಯುಷ್ ಶೆಟ್ಟಿ ಯು.ಎಸ್. ಓಪನ್ ನಲ್ಲಿ ತನ್ನ ಚೊಚ್ಚಲ ಸೂಪರ್-300 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಈ ವರ್ಷದ ಇತರ ಪ್ರಮುಖ ಪ್ರದರ್ಶನಗಳ ನಂತರ ಈ ಗೆಲುವು ಭಾರತೀಯ ಬ್ಯಾಡ್ಮಿಂಟನ್ ನ ಮಹತ್ವದ ಸಾಧನೆಯಾಗಿದೆ. ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಹಾಂಕಾಂಗ್ ಹಾಗೂ ಚೀನಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಫೈನಲ್ ಗೆ ತಲುಪಿದ್ದರು. ಕಿಡಂಬಿ ಶ್ರೀಕಾಂತ್ ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ರನ್ನರ್-ಅಪ್ ಆಗಿದ್ದರು.
2024ರಲ್ಲಿ ಒರ್ಲಿಯನ್ಸ್ ಮಾಸ್ಟರ್ಸ್ ಹಾಗೂ ಯು.ಎಸ್. ಓಪನ್ ಟೂರ್ನಿಯಲ್ಲಿ ಎರಡು ಸೂಪರ್-300 ಪ್ರಶಸ್ತಿಗಳನ್ನು ಜಯಿಸಿರುವ ಟನಕಾ ಫೈನಲ್ ಪಂದ್ಯದುದ್ದಕ್ಕೂ ಲಕ್ಷ್ಯ ಸೇನ್ ಅವರ ಪ್ರಾಬಲ್ಯದ ಎದುರು ಮಂಕಾದರು.







