ಯುಎಇ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಲಾಲ್ ಚಂದ್ ರಜಪೂತ್ ನೇಮಕ

ಲಾಲ್ ಚಂದ್ ರಜಪೂತ್ | Photo: PTI
ಮುಂಬೈ: ಭಾರತದ ಮಾಜಿ ಆರಂಭಿಕ ಬ್ಯಾಟರ್ ಲಾಲ್ ಚಂದ್ ರಜಪೂತ್ ಮುಂದಿನ ಮೂರು ವರ್ಷಗಳ ಅವಧಿಗೆ ಯುಎಇ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಮುಂಬೈಕರ್ ರಜಪೂತ್ ಈ ವಾರ ಅಧಿಕೃತವಾಗಿ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ.ಯುಎಇ ಆತಿಥ್ಯದಲ್ಲಿ ನಡೆಯುವ, ಸ್ಕಾಟ್ಲ್ಯಾಂಡ್ ಹಾಗೂ ಕೆನಡಾ ಭಾಗವಹಿಸಲಿರುವ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಲೀಗ್ ಏಕದಿನ ತ್ರಿಕೋನ ಸರಣಿಯಲ್ಲಿ ರಜಪೂತ್ ಯುಎಇ ತಂಡಕ್ಕೆ ಮೊದಲ ಬಾರಿ ಕೋಚಿಂಗ್ ನೀಡಲಿದ್ದಾರೆ. ತ್ರಿಕೋನ ಸರಣಿಯು ಫೆಬ್ರವರಿ 28ರಿಂದ ಆರಂಭವಾಗಲಿದೆ. ಯುಎಇ ಮುಂದಿನ ತಿಂಗಳು ಸ್ಕಾಟ್ಲ್ಯಾಂಡ್ನೊಂದಿಗೆ ಮೂರು ದ್ವಿಪಕ್ಷೀಯ ಟಿ20 ಪಂದ್ಯವನ್ನು ಆಯೋಜಿಸಲಿದೆ.
ಸದ್ಯ ಮುಂಬೈ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿರುವ ರಜಪೂತ್ ಭಾರತದ ಪರ 1985-87ರಲ್ಲಿ ಎರಡು ಟೆಸ್ಟ್ ಹಾಗೂ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಿವೃತ್ತಿಯ ನಂತರ ರಜಪೂತ್ ಕೋಚಿಂಗ್ ನಲ್ಲಿ ತನ್ನನ್ನು ತೊಡಗಿಸಿಕೊಂಡರು. 2007ರಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಭಾರತದ ಯುವ ತಂಡಕ್ಕೆ ರಜಪೂತ್ ತರಬೇತುದಾರರಾಗಿದ್ದರು.
ಆ ನಂತರ 62ರ ಹರೆಯದ ರಜಪೂತ್ 2016-17ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ರಜಪೂತ್ ಕೋಚ್ ಆಗಿದ್ದ ಅವಧಿಯಲ್ಲಿ ಅಫ್ಘಾನಿಸ್ತಾನ ತಂಡ ಐಸಿಸಿಯಿಂದ ಟೆಸ್ಟ್ ಸ್ಥಾನಮಾನ ಪಡೆದಿತ್ತು. ಆ ಬಳಿಕ ಝಿಂಬಾಬ್ವೆಯ ಪುರುಷರ ಕ್ರಿಕೆಟ್ ತಂಡಕ್ಕೆ 2018ರಿಂದ 2022ರ ತನಕ ಮುಖ್ಯ ಕೋಚ್ ಆಗಿದ್ದರು. ಆ ನಂತರ ಟೀಮ್ ಡೈರೆಕ್ಟರ್ ಆಗಿದ್ದರು. 2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಗೆ ಝಿಂಬಾಬ್ವೆ ಅರ್ಹತೆ ಪಡೆಯಲು ನೆರವಾಗಿದ್ದರು. ಅಸ್ಸಾಂ ತಂಡಕ್ಕೆ ತರಬೇತು ನೀಡಿದ್ದ ಅವರು 2014ರಲ್ಲಿ ಮುಂಬೈನ ಹಂಗಾಮಿ ಕೋಚ್ ಆಗಿದ್ದರು.
ಕೋಚ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಯುಎಇ ಇತ್ತೀಚೆಗಿನ ವರ್ಷಗಳಲ್ಲಿ ಬಲಿಷ್ಠ ಅಸೋಸಿಯೇಟ್ ತಂಡದ ಪೈಕಿ ಒಂದಾಗಿದೆ. ಆಟಗಾರರು ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಿನ ಆಟಗಾರರ ಬಳಗ ಅತ್ಯಂತ ಪ್ರತಿಭಾವಂತರಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಯುಎಇ ಕ್ರಿಕೆಟ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ರಜಪೂತ್ ತಿಳಿಸಿದ್ದಾರೆ.







