ಲೌಸೇನ್ ಡೈಮಂಡ್ ಲೀಗ್ : ನೀರಜ್, ನದೀಮ್, ರಮೇಶ್ ಪತಿರಗೆ ಸೆಣಸಾಟಕ್ಕೆ ವೇದಿಕೆ ಸಜ್ಜು

ನೀರಜ್ ಚೋಪ್ರಾ | Photo Credit : PTI
ಹೊಸದಿಲ್ಲಿ, ಆ. 4: ಆಗಸ್ಟ್ 21 ರಂದು ನಡೆಯಲಿರುವ ಲೌಸೇನ್ ಪಂದ್ಯಾವಳಿಯ ಮೂಲಕ ನೀರಜ್ ಚೋಪ್ರಾ ಡೈಮಂಡ್ ಲೀಗ್ಗೆ ಮರಳಲಿದ್ದು, ಈ ಋತುವಿನ ಅತ್ಯಂತ ಪ್ರಬಲ ಜಾವೆಲಿನ್ ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಗ್ಲಾಸ್ಗೊದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಕೆಲವೇ ದಿನಗಳ ಬಳಿಕ, ಭಾರತದ ಈ ತಾರಾ ಆಟಗಾರ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್, ಹಾಲಿ ವಿಶ್ವ ಚಾಂಪಿಯನ್ ಕೇಶಾರ್ನ್ ವಾಲ್ಕಾಟ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್, ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಥಾಮಸ್ ರೋಲರ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ರಮೇಶ್ ಪತಿರಗೆ ಅವರನ್ನು ಎದುರಿಸಲಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್, ಗ್ಲಾಸ್ಗೊದಲ್ಲಿ 85.83 ಮೀಟರ್ ಎಸೆದು ಬೆಳ್ಳಿ ಪದಕ ಪಡೆದಿದ್ದಾರೆ. ಇದು ಈ ಋತುವಿನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆ ಸ್ಪರ್ಧೆಯಲ್ಲಿ 89.75 ಮೀಟರ್ ಎಸೆದು ಚಿನ್ನದ ಪದಕ ಗೆದ್ದ ಶ್ರೀಲಂಕಾದ ಪತಿರಗೆ ಮೊದಲ ಸ್ಥಾನ ಪಡೆದಿದ್ದರು.
‘‘ಕಳೆದ ನಾಲ್ಕು ಆವೃತ್ತಿಗಳ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ಗಳನ್ನು ಗೆದ್ದಿರುವ ಜಾವೆಲಿನ್ ಕ್ಷೇತ್ರದ ಐವರು ದಿಗ್ಗಜರು, ಆಗಸ್ಟ್ 21 ರಂದು ನಡೆಯಲಿರುವ ಅತ್ಲೆಟಿಸಿಮಾದಲ್ಲಿ ಉನ್ನತ ಗುಣಮಟ್ಟದ ಸ್ಪರ್ಧೆ ನೀಡಲಿದ್ದಾರೆ’’ ಎಂದು ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ನಲ್ಲಿ ನಡೆದ ದೋಹಾ ಹಂತದ ಸ್ಪರ್ಧೆಯ ನಂತರ ಲೌಸೇನ್ ಕೂಟವು ಈ ಋತುವಿನಲ್ಲಿ ನೀರಜ್ ಅವರ ಎರಡನೇ ಡೈಮಂಡ್ ಲೀಗ್ ಸ್ಪರ್ಧೆಯಾಗಲಿದೆ. ದೋಹಾದಲ್ಲಿ ಅವರು 85.69 ಮೀಟರ್ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದರು.
28 ವರ್ಷದ ನೀರಜ್ರಿಗೆ ಲೌಸೇನ್ನಲ್ಲಿ ಈ ಹಿಂದೆಯೂ ಯಶಸ್ಸು ಸಿಕ್ಕಿದ್ದು, 2024ರ ಕೂಟದಲ್ಲಿ 89.49 ಮೀಟರ್ ಎಸೆದು ಎರಡನೇ ಸ್ಥಾನ ಪಡೆದಿದ್ದರು.






