ಗಂಭೀರ್ ಅನುಪಸ್ಥಿತಿಯಲ್ಲಿ ಲಕ್ಷ್ಮಣ್ ಗೆ ಭಾರತೀಯ ತಂಡದ ಉಸ್ತುವಾರಿ

ವಿ.ವಿ.ಎಸ್. ಲಕ್ಷ್ಮಣ್ , ಗೌತಮ್ ಗಂಭೀರ್ | PTI
ಮುಂಬೈ: ಪ್ರಧಾನ ಕೋಚ್ ಗೌತಮ್ ಗಂಭೀರ್ ರ ಅನುಪಸ್ಥಿತಿಯಲ್ಲಿ, ಭಾರತದ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಿದ್ಧತೆಗಳನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ನೋಡಿಕೊಳ್ಳಲಿದ್ದಾರೆ ಎಂಬುದಾಗಿ ‘ರೆವ್ ಸ್ಪೋರ್ಟ್ಸ್’ ವರದಿ ಮಾಡಿದೆ.
ಸರಣಿ ಆರಂಭಕ್ಕೆ ಕೆಲವೇ ದಿನಗಳಿರುವಂತೆಯೇ, ಗಂಭೀರ್ ತನ್ನ ಕಾಯಿಲೆಪೀಡಿತ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಇಂಗ್ಲೆಂಡ್ನಿಂದ ಭಾರತಕ್ಕೆ ವಾಪಸಾಗಿದ್ದಾರೆ.
ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಮುಖ್ಯಸ್ಥರಾಗಿರುವ ಲಕ್ಷ್ಮಣ್, ಅಂಡರ್-19 ತಂಡದ ಬ್ರಿಟನ್ ಪ್ರವಾಸದ ಮುನ್ನ ಈಗಾಗಲೇ ಲಂಡನ್ನಲ್ಲಿದ್ದಾರೆ. ಗಂಭೀರ್ ತಂಡಕ್ಕೆ ಮರುಸೇರ್ಪಡೆಯಾಗುವವರೆಗೆ ಲಕ್ಷ್ಮಣ್ ತಂಡದ ಸಿದ್ಧತೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ, ಲಕ್ಷ್ಮಣ್ ದಕ್ಷಿನ ಆಫ್ರಿಕ ವಿರುದ್ಧದ ಟಿ20 ಸರಣಿಯೊಂದರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಗಂಭೀರ್ ಯಾವಾಗ ಇಂಗ್ಲೆಂಡ್ಗೆ ಮರಳುವರು ಎನ್ನುವುದು ಗೊತ್ತಾಗಿಲ್ಲ.
ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ರ ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಈ ಮೂವರು ಆಟಗಾರರು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜೂನ್ 20ರಂದು ಹೆಡಿಂಗ್ಲೆಯಲ್ಲಿ ಆರಂಭಗೊಳ್ಳಲಿದೆ.







