ನಾಳೆ ಲೀಗ್ ಹಂತದ ಪಂದ್ಯಗಳಿಗೆ ತೆರೆ; ಕ್ವಾಲಿಫೈಯರ್-1ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿ ಆರ್ ಸಿ ಬಿ

Photo : x/@IPL
ಲಕ್ನೊ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ನಡೆಯಲಿರುವ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎದುರಿಸಲಿದೆ. ಲಕ್ನೊವನ್ನು ಮಣಿಸಿದರೆ ಆರ್ ಸಿ ಬಿ ಟಾಪ್-2ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್-1ರಲ್ಲಿ ಸ್ಥಾನ ಪಡೆಯುವುದು ನಿಶ್ಚಿತ.
ಈ ಋತುವಿನಲ್ಲಿ ತವರು ಮೈದಾನದಿಂದ ಹೊರಗೆ ಆಡಿರುವ ಎಲ್ಲ 6 ಪಂದ್ಯಗಳನ್ನು ಜಯಿಸಿದ್ದ ಆರ್ ಸಿ ಬಿ ಈ ಸಾಧನೆ ಮಾಡಿದ್ದ ಮೊದಲ ತಂಡ ಎನಿಸಿಕೊಂಡಿತ್ತು. ಆದರೆ ಕೆಲವೇ ದಿನಗಳ ಹಿಂದೆ ಇದೇ ಮೈದಾನದಲ್ಲಿ ಆರ್ ಸಿ ಬಿ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು.
ಲಕ್ನೊ ತಂಡವು ತವರು ಮೈದಾನದಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸುವ ಅವಕಾಶ ಹೊಂದಿದೆ. ಅಹ್ಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ್ದ ಲಕ್ನೊ ತಂಡವು ಸತತ 4 ಪಂದ್ಯಗಳ ಸೋಲಿನಿಂದ ಹೊರ ಬಂದಿತ್ತು.
ಮಿಚೆಲ್ ಮಾರ್ಷ್ ಹಾಗೂ ಮರ್ಕ್ರಮ್ ಜೊತೆಯಾಟದ ಮೂಲಕ ಒಟ್ಟು 574 ರನ್ ಗಳಿಸಿದ್ದರು.
ಆರ್ ಸಿ ಬಿ ಬೌಲರ್ಗಳಾದ ಜೇಕಬ್ ಬೆಥೆಲ್ ಹಾಗೂ ಲುಂಗಿ ಗಿಡಿ ಸ್ವದೇಶಕ್ಕೆ ವಾಪಸಾಗಿದ್ದು ಜೋಶ್ ಹೇಝಲ್ ವುಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆರ್ ಸಿ ಬಿ ತಂಡ ಹೇಝಲ್ ವುಡ್ ರನ್ನು ತಕ್ಷಣವೇ ಮೈದಾನಕ್ಕೆ ಇಳಿಸಲಿದೆಯೇ ಎಂಬ ಕುತೂಹಲ ಮೂಡಿದೆ.
2023ರಲ್ಲಿ ಲಕ್ನೊದಲ್ಲಿ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಆರ್ ಸಿ ಬಿ ಜಯ ಸಾಧಿಸಿತ್ತು.







