ಯಜುವೇಂದ್ರ ಚಹಾಲ್ ಸ್ಥಾನ ತುಂಬುವರೇ ಲೆಗ್ ಸ್ಪಿನ್ನರ್?
ಟ್ವೆಂಟಿ-20 ವಿಶ್ವಕಪ್ 2024: ಭಾರತದ ಮೂರನೇ ಸ್ಪಿನ್ನರ್ ಆಗಿ ಹೊರಹೊಮ್ಮಿರುವ ರವಿ ಬಿಷ್ಣೋಯ್

Photo- PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ವಿದೇಶಿ ಸರಣಿಗಾಗಿ ಭಾರತದ ಟ್ವೆಂಟಿ-20 ತಂಡದಲ್ಲಿ ಸ್ಥಾನ ಪಡೆದಿರುವ ರವಿ ಬಿಷ್ಣೋಯ್ ಅವರು ತಂಡದ ದೀರ್ಘಕಾಲ ಯೋಜನೆಯ ಭಾಗವಾಗುವ ಸ್ಪಷ್ಟ ಸಂಕೇತವಾಗಿದೆ. ಅತ್ಯಂತ ಮುಖ್ಯವಾಗಿ ಮುಂದಿನ ವರ್ಷ ನಡೆಯುವ ಟ್ವೆಂಟಿ-20 ವಿಶ್ವಕಪ್ನ್ನು ಮನಸ್ಸಿನಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟ್ವೆಂಟಿ-20 ವಿಶ್ವಕಪ್ಗಿಂತ ಮೊದಲು ಕೇವಲ ಆರು ಟಿ-20 ಪಂದ್ಯಗಳು ಆಡಲು ಬಾಕಿ ಇದೆ. ತಂಡದ ಆದ್ಯತೆಯ ವಿಚಾರದಲ್ಲಿ 23ರ ಹರೆಯದ ರವಿ ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಾಲ್ರನ್ನು ತಾತ್ಕಾಲಿಕವಾಗಿ ಹಿಂದಿಕ್ಕಿ ಸ್ಥಾನ ಪಡೆದಿರುವಂತೆ ಕಂಡುಬಂದಿದೆ. ಚಹಾಲ್ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತದ ಟಿ-20 ತಂಡದಲ್ಲಿ ಸ್ಥಾನ ಪಡೆದಿಲ್ಲ.
ಆಸ್ಟ್ರೇಲಿಯದ ವಿರುದ್ಧ ಭಾರತದ ಟಿ-20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ರವಿ ಬಿಷ್ಣೋಯ್ ಅವರು ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
33ರ ಹರೆಯದ ಚಹಾಲ್ ಹಾಗೂ 23ರ ಹರೆಯದ ಬಿಷ್ಣೋಯ್ ನಡುವೆ 10 ವರ್ಷಗಳ ಅಂತರವಿದೆ. ಈ ವರ್ಷ ಟಿ-20 ಕ್ರಿಕೆಟ್ನಲ್ಲಿ ಚಹಾಲ್ ಕೇವಲ 9 ಪಂದ್ಯಗಳನ್ನು ಆಡಿದ್ದು 9 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಬಿಷ್ಣೋಯ್ 11 ಪಂದ್ಯಗಳಲ್ಲಿ ಆಡಿದ್ದು 18 ವಿಕೆಟ್ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ.
ರವಿವಾರ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಬಿಷ್ಣೋಯ್ ಭಾರತದ ಪ್ರಮುಖ ಸ್ಪಿನ್ ಬೌಲಿಂಗ್ ಅಸ್ತ್ರವಾಗಿ ಕಂಡುಬಂದಿದ್ದರು. 5 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಕಬಳಿಸಿದ್ದ ಬಿಷ್ಣೋಯ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮಾತ್ರವಲ್ಲ ತಂಡ ತನ್ನ ಮೇಲಿಟ್ಟಿರುವ ನಂಬಿಕೆಗೆ ನ್ಯಾಯ ಒದಗಿಸಿದ್ದಾರೆ.
ವಿಕೆಟ್ ಪಡೆಯುವಲ್ಲಿ ಮಾತ್ರವಲ್ಲ ಯಾವುದೇ ಪರಿಸ್ಥಿತಿ ಇಲ್ಲವೇ ವಾತಾವರಣದಲ್ಲಿ ಆಡುವ ಅವರ ಮನೋಬಲವು ಪ್ರಶಂಸನಾರ್ಹವಾಗಿದೆ.
ಬಿಷ್ಣೋಯ್ ವಿಶಾಖಪಟ್ಟಣದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್ಗಳಲ್ಲಿ 54 ರನ್ ಗಳಿಸಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಫೀಲ್ಡಿಂಗ್ನಲ್ಲೂ ಹಲವು ಕ್ಯಾಚ್ ಕೈಚೆಲ್ಲಿದ್ದರು. ಆ ನಂತರದ ಪಂದ್ಯಗಳಲ್ಲಿ ಮರು ಹೋರಾಟ ನೀಡಿದ್ದ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಬೌಲಿಂಗ್ನಲ್ಲಿ ಅವರ ರನ್ರೇಟ್ 8ನ್ನು ಮೀರಲಿಲ್ಲ. ಆಸೀಸ್ ವಿರುದ್ಧ ಎಸೆದಿರುವ 20 ಓವರ್ಗಳಲ್ಲಿ 7 ಓವರ್ನ್ನು ಪವರ್ಪ್ಲೇ ವೇಳೆ(1ರಿಂದ 6 ಓವರ್ಗಳು)ಎಸೆದಿದ್ದರು. ಈ ಹಂತದಲ್ಲಿ ಅವರು 6.45ರ ಇಕಾನಮಿ ರೇಟ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸಿದ್ದಲ್ಲದೆ 20 ಡಾಟ್ ಬೌಲ್ಗಳನ್ನು ಎಸೆದಿದ್ದರು.
ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲೂ ರವಿ ಬಿಷ್ಣೋಯ್ ಬೌಲಿಂಗ್ ಎದುರಿಸುವುದು ಸುಲಭದ ಮಾತಾಗಿರಲಿಲ್ಲ . ಅವರು 4 ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ನಮ್ಮ ಕೆಲವು ಆಟಗಾರರು ಅನನುಭವಿಗಳು. ಅವರನ್ನು ಎದುರಿಸಿ ಸಾಕಷ್ಟು ಕಲಿತಿದ್ದಾರೆ. ಭಾರತದ ಸ್ಪಿನ್ನರ್ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ನಮ್ಮನ್ನು ಅವರು ಕಟ್ಟಿಹಾಕಿದರು. ಇದು ಪಂದ್ಯದಲ್ಲಿ ಹೆಚ್ಚು ವ್ಯತ್ಯಾಸಕ್ಕೆ ಕಾರಣವಾಯಿತು ಎಂದು ಆಸ್ಟ್ರೇಲಿಯದ ನಾಯಕ ಮ್ಯಾಥ್ಯೂ ವೇಡ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಮಿಂಚುತ್ತಿರುವ ಬಿಷ್ಣೋಯ್ ಹಿರಿಯ ಆಟಗಾರರಾದ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ಭಾರತ ತಂಡಕ್ಕೆ ವಾಪಸಾದ ನಂತರ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಲು ಸವಾಲು ಎದುರಿಸಬೇಕಾಗುತ್ತದೆ.
ರವಿ ಬಿಷ್ಣೋಯ್ ಅವರು ಸ್ಪಿನ್ ವಿಭಾಗದಲ್ಲಿ ಭಾರತಕ್ಕೆ ಮೂರನೇ ಆಯ್ಕೆ ನೀಡಿದ್ದಾರೆ. ಚಹಾಲ್ರಂತಹ ಆಟಗಾರರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಸ್ಥಾನ ಪಡೆಯುವುದು ಸುಲಭ ಸಾಧ್ಯವಲ್ಲ. ಆದರೆ ಬಿಷ್ಣೋಯ್ ಇದನ್ನು ಸುಲಭವಾಗುವಂತೆ ಮಾಡಿದ್ದಾರೆ. ಅವರು ಈ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ. ಟಿ-20 ವಿಶ್ವಕಪ್ ವೆಸ್ಟ್ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿದೆ. ಅಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವಾಗುವ ನಿರೀಕ್ಷೆ ಇದೆ. ಮೂವರು ಸ್ಪಿನ್ನರ್ಗಳಿದ್ದರೆ ತಂಡಕ್ಕೆ ನಿರ್ದಿಷ್ಟ ಮೇಲುಗೈ ಒದಗಿಸಲಿದೆ ಎಂದು ಭಾರತದ ಮಾಜಿ ಸ್ಪಿನ್ನರ್ವೊಬ್ಬರು ಪಿಟಿಐಗೆ ತಿಳಿಸಿದ್ದಾರೆ.







