ಮೂರ್ಖ ಹೇಳಿಕೆ ನೀಡುವ ಬದಲು ಭಾರತದ ಆಟಗಾರರು ಆತ್ಮಾವಲೋಕನ ಮಾಡಿಕೊಳ್ಳಲಿ: ವೆಂಕಟೇಶ್ ಪ್ರಸಾದ್ ಟೀಕೆ

ಹೊಸದಿಲ್ಲಿ: ಭಾರತವು ಇದೀಗ ಸ್ವಲ್ಪ ಸಮಯದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಸಾಮಾನ್ಯ ತಂಡವಾಗಿದೆ. ಕೆಲವು ತಿಂಗಳ ಹಿಂದೆ ಟ್ವೆಂಟಿ-20 ವಿಶ್ವಕಪ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ವೆಸ್ಟ್ ಇಂಡೀಸ್ ತಂಡದಿಂದ ಭಾರತವು ಇದೀಗ ಸೋತಿದೆ. ನಾವು ಏಕದಿನ ಸರಣಿಯಲ್ಲೂ ಬಾಂಗ್ಲಾದೇಶ ವಿರುದ್ಧ ಸೋತಿದ್ದೇವೆ. ಮೂರ್ಖ ಹೇಳಿಕೆಗಳನ್ನು ನೀಡುವ ಬದಲು ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ " ಎಂದು ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ವಿಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ 0-2 ಹಿನ್ನಡೆಯಲ್ಲಿದ್ದ ಭಾರತವು 4ನೇ ಟಿ-20 ಜಯಿಸಿದ ನಂತರ ಸರಣಿಯನ್ನು 2-2ರಿಂದ ಸಮಬಲಗೊಳಿಸಿತು. 5ನೇ ಪಂದ್ಯವನ್ನು ಸೋತು ಸರಣಿಯನ್ನು 3-2 ಅಂತರದಿಂದ ಕಳೆದುಕೊಂಡಿತು. 50 ಓವರ್ ವಿಶ್ವಕಪ್ ಮಾತ್ರವಲ್ಲ ಕಳೆದ ಬಾರಿ ಟಿ-20 ವಿಶ್ವಕಪ್ ಗೂ ಅರ್ಹತೆ ಪಡೆಯಲು ವಿಂಡೀಸ್ ವಿಫಲವಾಗಿದೆ. ಈ ತಂಡದ ವಿರುದ್ಧ ಭಾರತದ ಪ್ರದರ್ಶನ ನೋವುಂಟು ಮಾಡುತ್ತಿದೆ ಎಂದು ಪ್ರಸಾದ್ ಟ್ವೀಟಿಸಿದರು.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಬಳಗವನ್ನು ಟೀಕಿಸುತ್ತಿರುವ ಪ್ರಸಾದ್ ಇದೀಗ ಸರಣಿ ಸೋತಿರುವುದಕ್ಕೆ ಮತ್ತೆ ಟೀಕಿಸಿದರು.
"ಭಾರತವು ತಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕಾಗಿದೆ. ಆಟಗಾರರ ಗೆಲ್ಲಬೇಕೆಂಬ ಹಸಿವು ಮತ್ತು ತೀವ್ರತೆಯ ಕೊರತೆ ಇದೆ ಆಗಾಗ್ಗೆ ನಾಯಕನು ಸುಳಿವಿಲ್ಲದಂತೆ ಕಾಣುತ್ತಾನೆ. ಬೌಲರ್ ಗಳು ಬ್ಯಾಟ್ ಮಾಡಲು ಸಾಧ್ಯವಿಲ್ಲ, ಬ್ಯಾಟ್ಸ್ಮನ್ ಗಳು ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದರು.