ಕೇರಳಕ್ಕೆ ಲಿಯೊನೆಲ್ ಮೆಸ್ಸಿ; ನ. 17ರಂದು ಕೊಚ್ಚಿಯಲ್ಲಿ ಅರ್ಜೆಂಟೀನ- ಆಸ್ಟ್ರೇಲಿಯ ಫುಟ್ಬಾಲ್ ಪಂದ್ಯ

ಲಿಯೊನೆಲ್ ಮೆಸ್ಸಿ | Photo Credit : PTI
ಕೊಝಿಕ್ಕೋಡ್, ಅ. 13: ಕೇರಳದ ಕೊಚ್ಚಿಯ ಜವಾಹರಲಾಲ್ ನೆಹರೂ ಸ್ಟೇಡಿಯಮ್ ನಲ್ಲಿ ನವೆಂಬರ್ 17ರಂದು ಲಿಯೊನೆಲ್ ಮೆಸ್ಸಿಯನ್ನು ಒಳಗೊಂಡ ಅರ್ಜೆಂಟೀನ ತಂಡವು ಆಸ್ಟ್ರೇಲಿಯ ವಿರುದ್ಧ ಫಿಫಾ ಅಂತರ್ರಾಷ್ಟ್ರೀಯ ಸ್ನೇಹ ಪಂದ್ಯವೊಂದನ್ನು ಆಡಲಿದೆ.
ಜೊತೆಗೆ, ಆಸ್ಟ್ರೇಲಿಯವು ಇನ್ನೊಂದು ಅಂತರ್ರಾಷ್ಟ್ರೀಯ ಸ್ನೇಹ ಪಂದ್ಯದಲ್ಲೂ ಆಡುವ ಸಾಧ್ಯತೆಯಿದೆ.
ಈ ಸ್ನೇಹ ಪಂದ್ಯದ ಪ್ರಾಯೋಜಕ ‘ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪೆನಿ’ಯ ಆಡಳಿತ ನಿರ್ದೇಶಕ ಆಂಟೊ ಆಗಸ್ಟಿನ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ‘‘ಆಸ್ಟ್ರೇಲಿಯದ ವಿರುದ್ಧ ಇನ್ನೊಂದು ಪಂದ್ಯವನ್ನು ಆಡಲು ಬಲಿಷ್ಠ ತಂಡವೊಂದನ್ನು ತರಲು ಪ್ರಯತ್ನಗಳು ಸಾಗುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ನಾವು ಇದನ್ನು ಖಚಿತಪಡಿಸಬಹುದಾಗಿದೆ’’ ಎಂದು ಅವರು ಹೇಳಿದರು. ‘‘ನಮ್ಮ ಗಮನದಲ್ಲಿರುವ ತಂಡಗಳ ಪೈಕಿ ಇರಾನ್ ಒಂದಾಗಿದೆ’’ ಎಂದು ಅವರು ನುಡಿದರು.
‘‘ಅರ್ಜೆಂಟೀನವು ನವೆಂಬರ್ 15ರಂದು ಕೊಚ್ಚಿಯನ್ನು ತಲುಪಲಿದೆ. ಆಸ್ಟ್ರೇಲಿಯವು ನವೆಂಬರ್ 10ರಂದು ಬರಲಿದೆ. ಆಸ್ಟ್ರೇಲಿಯ ತಂಡದ ಜೊತೆಗೆ ಆಸ್ಟ್ರೇಲಿಯ ಸರಕಾರದ ಒಂದು ನಿಯೋಗವೂ ಬರಲಿದೆ’’ ಎಂದರು.
ಪಂದ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು. ‘‘ಟೆಲಿವಿಶನ್ ಹಕ್ಕುಗಳ ವಿತರಣೆಯನ್ನು ನಾವು ಅಂತಿಮಗೊಳಿಸುತ್ತಿದ್ದೇವೆ. ಪ್ರಮುಖ ಭಾರತೀಯ ಕ್ರೀಡಾ ಚಾನೆಲೊಂದು ಪಂದ್ಯವನ್ನು ಪ್ರಸಾರ ಮಾಡಲಿದೆ’’ ಎಂದರು.





