ಮುಂಬೈಗೆ ಆಗಮಿಸಿದ ಲಿಯೊನೆಲ್ ಮೆಸ್ಸಿಗೆ ಭವ್ಯ ಸ್ವಾಗತ

Photo Credit : X
ಮುಂಬೈ, ಡಿ.14: ‘GOAT ಟೂರ್ ಆಫ್ ಇಂಡಿಯಾ’ ಪ್ರವಾಸದ ಭಾಗವಾಗಿ ಮೂರು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ರವಿವಾರ ಮುಂಬೈಗೆ ಆಗಮಿಸಿದ್ದಾರೆ. ಮೊದಲ ದಿನವಾದ ಶನಿವಾರ ಕೋಲ್ಕತಾ ಹಾಗೂ ಹೈದರಾಬಾದ್ ಗೆ ಭೇಟಿ ನೀಡಿದ್ದರು.
ಜಾಗತಿಕ ಫುಟ್ಬಾಲ್ ಐಕಾನ್ ಮೆಸ್ಸಿ ಅವರನ್ನು ಬಿಗಿ ಭದ್ರತೆಯ ನಡುವೆ ಸ್ವಾಗತಿಸಲಾಯಿತು. ಮೆಸ್ಸಿ ಅವರ ನಿಗದಿತ ಪ್ರದರ್ಶನಗಳಿಗಾಗಿ ಕಾತರದಿಂದ ಕಾಯುತ್ತಿದ್ದ ಫುಟ್ಬಾಲ್ ಅಭಿಮಾನಿಗಳು ತಮ್ಮ ಮೊಬೈಲ್ ಗಳಲ್ಲಿ ಅಪರೂಪದ ಕ್ಷಣಗಳನ್ನು ಸೆರೆ ಹಿಡಿದರು.
ಮೆಸ್ಸಿ ಭೇಟಿಯು ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಅಪರೂಪದ ಹಾಗೂ ಸ್ಮರಣೀಯ ಕ್ಷಣವಾಗಲಿದೆ. ಮೆಸ್ಸಿಯನ್ನು ನೋಡಲು ವಾಂಖೆಡೆ ಸ್ಟೇಡಿಯಂನಲ್ಲಿ ಫುಟ್ಬಾಲ್ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಮೆಸ್ಸಿ ಆಗಮನಕ್ಕೆ ಮೊದಲೇ ಅಭಿಮಾನಿಗಳು ‘ಮೆಸ್ಸಿ, ಮೆಸ್ಸಿ’ಎಂದು ಘೋಷಣೆ ಕೂಗಲಾರಂಭಿಸಿದರು.
ಭಾರತದ ಫುಟ್ಬಾಲ್ ಲೆಜೆಂಡರ್ ಸುನೀಲ್ ಚೆಟ್ರಿ ಅವರು ತಮ್ಮ ಅಚ್ಚುಮೆಚ್ಚಿನ ಆಟಗಾರ ಮೆಸ್ಸಿ ಅವರನ್ನು ಭೇಟಿಯಾದರು. ಮೆಸ್ಸಿ ಅವರು ಚೆಟ್ರಿಗೆ ತನ್ನ ಅರ್ಜೆಂಟೀನದ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಮಿತ್ರಾ ಸ್ಟಾರ್ ತಂಡದ ಪರ ಆಟವಾಡಿರುವ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಗಮನಸೆಳೆದರು.
ಪಂದ್ಯಕ್ಕೂ ಮುನ್ನ ಮೆಸ್ಸಿ ಜೊತೆ ಮೈದಾನದಲ್ಲಿ ಮಾತುಕತೆಯನ್ನು ಕೂಡ ನಡೆಸಿದ್ದಾರೆ. ಭಾರತದ ಫುಟ್ಬಾಲ್ ವಲಯದಲ್ಲಿ ಜನಪ್ರಿಯರಾಗಿರುವ ಸುನೀಲ್ ಚೆಟ್ರಿ ಅವರು ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಲಿಯೊನೆಲ್ ಮೆಸ್ಸಿ ಅವರನ್ನು ಭೇಟಿಯಾಗಲು ಸುನೀಲ್ ಚೆಟ್ರಿ ನಿರಾಕರಿಸಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರು ತಮ್ಮ 2011ರ ವಿಶ್ವಕಪ್ ವಿಜೇತ ಜೆರ್ಸಿಯನ್ನು ಲಿಯೊನೆಲ್ ಮೆಸ್ಸಿಗೆ ಪ್ರದಾನಿಸಿದರು.
ಸೌಹಾರ್ದ ಪ್ರದರ್ಶನ ಪಂದ್ಯದ ಆಟಗಾರರೊಂದಿಗೆ ಮೆಸ್ಸಿ, ಸುವಾರೆಝ್ ಹಾಗೂ ಡಿ ಪಾಲ್ ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡರು. ರೋಂಡೋದಲ್ಲಿ ಆಡಿದ ಮಹತ್ವಾಕಾಂಕ್ಷಿ ಫುಟ್ಬಾಲ್ ಆಟಗಾರರು ಮೆಸ್ಸಿ, ಸುವರೆಝ್ ಹಾಗೂ ಡಿ ಪಾಲ್ ಅವರಿಂದ ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದಾರೆ.







