ಇದೇ ಮೊದಲ ಬಾರಿ ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದ್ದಾರೆ ಮೆಸ್ಸಿ

ಲಿಯೊನೆಲ್ ಮೆಸ್ಸಿ | Photo Credit : PTI
ಕಾನ್ಸಾಸ್ ಸಿಟಿ, ಜು. 13: ಲಿಯೊನೆಲ್ ಮೆಸ್ಸಿ ಅಂತರ್ರಾಷ್ಟ್ರೀಯ ಫುಟ್ಬಾಲ್ನಲ್ಲಿ ಎರಡು ದಶಕಗಳಿಗೂ ಅಧಿಕ ಸಮಯ ಕಳೆದಿದ್ದು, ಬ್ರೆಝಿಲ್ನಿಂದ ಫ್ರಾನ್ಸ್ ತನಕ ಪ್ರತೀ ವಿಶ್ವಕಪ್ ವಿಜೇತ ತಂಡವನ್ನು ಎದುರಿಸಿದ್ದಾರೆ. ಆದರೆ ಪ್ರಮುಖ ಎದುರಾಳಿ ಇಂಗ್ಲೆಂಡ್ ತಂಡವನ್ನು ಈ ತನಕ ಎದುರಿಸಿಲ್ಲ.
ಅರ್ಜೆಂಟೀನ ತಂಡವು ಗುರುವಾರ ಜುಲೈ 16ರಂದು ಅಟ್ಲಾಂಟಾದಲ್ಲಿ ನಡೆಯುವ ಎರಡನೇ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 39ರ ವಯಸ್ಸಿನ ಮೆಸ್ಸಿ ತನ್ನ ವೃತ್ತಿಜೀವನದಲ್ಲಿ ಬ್ರೆಝಿಲ್, ಉರುಗ್ವೆ, ಜರ್ಮನಿ, ಇಟಲಿ, ಸ್ಪೇನ್ ಹಾಗೂ ಫ್ರಾನ್ಸ್ ತಂಡಗಳನ್ನು ಎದುರಿಸಿದ್ದಾರೆ, ಆದರೆ ಇಂಗ್ಲೆಂಡ್ ತಂಡವನ್ನು ಮುಖಾಮುಖಿಯಾಗಿಲ್ಲ.
ಮೆಸ್ಸಿ 2005ರ ನವೆಂಬರ್ನಲ್ಲಿ ಜಿನೇವಾದಲ್ಲಿ ಇಂಗ್ಲೆಂಡ್ ವಿರುದ್ಧ ಸೌಹಾರ್ದ ಪಂದ್ಯವನ್ನಾಡುವ ಅವಕಾಶ ಪಡೆದಿದ್ದರು. ಉಭಯ ತಂಡಗಳು ಕೊನೆಯ ಬಾರಿ ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ವೇಯ್ನ್ ರೂನಿ ಹಾಗೂ ಮೈಕಲ್ ಓವೆನ್ ನೆರವಿನಿಂದ ಇಂಗ್ಲೆಂಡ್ ತಂಡವು ಅರ್ಜೆಂಟೀನವನ್ನು 3-2 ಅಂತರದಿಂದ ಸೋಲಿಸಿತ್ತು. ಅದೇ ವರ್ಷದ ಆರಂಭದಲ್ಲಿ ಹಂಗೇರಿ ತಂಡದ ವಿರುದ್ಧ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ್ದ ಮೆಸ್ಸಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಆಡಿರಲಿಲ್ಲ.
‘‘ಇದು ವಿಶೇಷವಾದುದು, ಏಕೆಂದರೆ, ಇಂಗ್ಲೆಂಡ್ ಶ್ರೇಷ್ಠ ತಂಡ, ಪವರ್ ಹೌಸ್ ಆಗಿದೆ. ಆ ತಂಡದ ವಿರುದ್ಧ ಆಡುವುದು ಯಾವಾಗಲೂ ಖುಷಿಯ ವಿಚಾರ.’’ ಎಂದು ಸ್ವಿಟ್ಸರ್ಲ್ಯಾಂಡ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದ ನಂತರ ಮೆಸ್ಸಿ ಸುದ್ದಿಗಾರರಿಗೆ ತಿಳಿಸಿದರು.






