ಲಿಯೊನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲು : ಅಲ್ಜೀರಿಯಾ ವಿರುದ್ಧ ಅರ್ಜೆಂಟೀನ ಶುಭಾರಂಭ

ಲಿಯೊನೆಲ್ ಮೆಸ್ಸಿ | Photo Credit : PTI
ಕಾನ್ಸಾಸ್ ಸಿಟಿ, ಜೂ.17: ನಾಯಕ ಲಿಯೊನೆಲ್ ಮೆಸ್ಸಿ ಅವರ ಹ್ಯಾಟ್ರಿಕ್ ಗೋಲು ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಅಲ್ಜೀರಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.
ಎಂಟು ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿ ಅವರು ವಿಶ್ವಕಪ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಹ್ಯಾಟ್ರಿಕ್ ಗೋಲು ದಾಖಲಿಸಿದರು.
ಅಲ್ಜೀರಿಯಾ ವಿರುದ್ಧ ಎಲ್ಲ ಮೂರು ಗೋಲುಗಳನ್ನು ಗಳಿಸಿದ ಮೆಸ್ಸಿ ಸಾರ್ವಕಾಲಿಕ ವಿಶ್ವಕಪ್ ಸ್ಕೋರಿಂಗ್ ದಾಖಲೆಯನ್ನು ಸರಿಗಟ್ಟಿದರು. ಒಟ್ಟು 16 ಗೋಲುಗಳನ್ನು ಗಳಿಸಿದ ಮೆಸ್ಸಿ ಅವರು ಜರ್ಮನಿಯ ಲೆಜೆಂಡ್ ಮಿರಾಸ್ಲೋವ್ ಕ್ಲೋಸ್ ದಾಖಲೆಯನ್ನು ಸರಿಗಟ್ಟಿದರು.
ಮೆಸ್ಸಿ ತನ್ನ ಯಶಸ್ವಿ ವೃತ್ತಿಜೀವನದಲ್ಲಿ 61ನೇ ಹ್ಯಾಟ್ರಿಕ್ ಗಳಿಸಿದರು. ಅರ್ಜೆಂಟೀನದ ಪರ 11ನೇ ಬಾರಿ ಈ ಸಾಧನೆ ಮಾಡಿದರು. ಸತತ ಐದನೇ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಗೋಲು ಗಳಿಸುವಿಕೆಯನ್ನು ಮುಂದುವರಿಸಿದ ಮೆಸ್ಸಿ, ಐದು ವಿವಿಧ ಆವೃತ್ತಿಗಳ ಟೂರ್ನಮೆಂಟ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರನಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.
ಜಾಗತಿಕ ಟೂರ್ನಮೆಂಟ್ನಲ್ಲಿ ಸರ್ಬಿಯ ತಂಡದ ವಿರುದ್ಧ ತನ್ನ ಮೊದಲ ಗೋಲು ಗಳಿಸಿದ ಸರಿಯಾಗಿ 20 ವರ್ಷಗಳ ನಂತರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಪೂರೈಸಿದ ಹಿರಿಯ ಆಟಗಾರನೆಂಬ ಹಿರಿಮೆಗೆ ಮೆಸ್ಸಿ ಪಾತ್ರರಾದರು.
ಈ ತಿಂಗಳಾಂತ್ಯದಲ್ಲಿ 39ನೇ ವಯಸ್ಸಿಗೆ ಕಾಲಿಡಲಿರುವ ಮೆಸ್ಸಿ ಅವರು ತನ್ನ ದೇಶದ ಪರ 200ನೇ ಪಂದ್ಯವನ್ನಾಡಿದರು. ಮಾತ್ರವಲ್ಲ ಆರು ವಿಶ್ವಕಪ್ ಟೂರ್ನಿಗಳನ್ನು ಆಡಿದ ಮೊದಲ ಆಟಗಾರನೆಂಬ ಕೀರ್ತಿಗೂ ಭಾಜನರಾದರು.
17ನೇ ನಿಮಿಷದಲ್ಲಿ ರೊಡ್ರಿಗೊ ಡಿ ಪೌಲ್ರಿಂದ ಚೆಂಡನ್ನು ಸಂಗ್ರಹಿಸಿದ ಮೆಸ್ಸಿ ತನ್ನ ಮೊದಲ ಗೋಲು ಗಳಿಸಿದರು.
60ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಅರ್ಜೆಂಟೀನದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಐದು ನಿಮಿಷದ ನಂತರ ಮೆಸ್ಸಿ ಹ್ಯಾಟ್ರಿಕ್ ಪೂರೈಸಲು ಮುಂದಾದರು. ಆದರೆ ಅಲ್ಜೀರಿಯಾದ ಗೋಲ್ಕೀಪರ್, ಫ್ರಾನ್ಸ್ನ ದಿಗ್ಗಜ ಝೈನುದ್ದೀನ್ ಝಿದಾನೆ ಅವರ ಪುತ್ರ ಲುಕಾ ಝಿದಾನೆ ಗೋಲನ್ನು ತಡೆದರು.
ತನ್ನ ಪ್ರಯತ್ನವನ್ನು ಮುಂದುವರಿಸಿದ ಮೆಸ್ಸಿ 76ನೇ ನಿಮಿಷದಲ್ಲಿ ಮೂರನೇ ಗೋಲು ಗಳಿಸಿ ಅರ್ಜೆಂಟೀನಕ್ಕೆ 3-0 ಅಂತರದ ಗೆಲುವು ತಂದುಕೊಟ್ಟರು.
ಮೆಸ್ಸಿ ಮೇನಿಯಾ: ಕಾನ್ಸಾಸ್ ಸಿಟಿಗೆ ಅರ್ಜೆಂಟೀನ ತಂಡ ಆಗಮಿಸಿದ ನಂತರ ಮೆಸ್ಸಿ ಮೇನಿಯಾ ಅಲೆ ಎದ್ದಿದೆ. ಆರೋಹೆಡ್ ಸ್ಟೇಡಿಯಂ ಸುತ್ತಮುತ್ತಲಿನ ವಾತಾವರಣವು ಕ್ರೀಡೆಯ ಶ್ರೇಷ್ಠ ಆಟಗಾರನಿಗೆ ಮೀಸಲಾಗಿದ್ದಂತೆ ಕಂಡುಬಂತು. ಸಾವಿರಾರು ಅಭಿಮಾನಿಗಳು ಮೆಸ್ಸಿಯ 10ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು. ಸ್ಟೇಡಿಯಂ ನೀಲಿ ಹಾಗೂ ಬಿಳಿ ಬಣ್ಣದ ಸಾಗರದಂತೆ ಕಂಡುಬಂದಿತು.
ಅಲ್ಜೀರಿಯಾ ವಿರುದ್ಧ ಮೆಸ್ಸಿ ನಿರ್ಮಿಸಿದ್ದ ದಾಖಲೆಯ ಪಟ್ಟಿ
-ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗಳಿಸಿದ ಹಿರಿಯ ಆಟಗಾರ
ಅಲ್ಜೀರಿಯಾ ವಿರುದ್ಧ ಮೂರು ಗೋಲುಗಳನ್ನು ಗಳಿಸಿದ 38ರ ವಯಸ್ಸಿನ ಮೆಸ್ಸಿ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗಳಿಸಿದ ಹಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡರು. ಕ್ರಿಸ್ಟಿಯಾನೊ ರೊನಾಲ್ಡೊರ ದಾಖಲೆಯನ್ನು ಮುರಿದರು.
ವಿಶ್ವಕಪ್ ಗೋಲು ಗಳಿಸಿದ ಅರ್ಜೆಂಟೀನದ ಕಿರಿಯ ಹಾಗೂ ಹಿರಿಯ ಆಟಗಾರ
ಮೆಸ್ಸಿ ಇದೀಗ ವಿಶ್ವಕಪ್ನಲ್ಲಿ ಅರ್ಜೆಂಟೀನದ ಪರ ಗೋಲು ಗಳಿಸಿದ ಹಿರಿಯ ಹಾಗೂ ಕಿರಿಯ ಆಟಗಾನೆಂಬ ಎರಡೂ ದಾಖಲೆಗೆ ಪಾತ್ರರಾದರು. 2006ರಲ್ಲಿ ಸರ್ಬಿಯದ ವಿರುದ್ಧ ತನ್ನ 18ನೇ ವಯಸ್ಸಿನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಗೋಲು ಗಳಿಸಿದ್ದರು.
ಫಿಫಾ ವಿಶ್ವಕಪ್ನಲ್ಲಿ ಗರಿಷ್ಠ ಗೋಲುಗಳು
ಅಲ್ಜೀರಿಯಾ ತಂಡದ ವಿರುದ್ಧ ತನ್ನ ಹ್ಯಾಟ್ರಿಕ್ ಗೋಲು ಗಳಿಸಿದ ನಂತರ ಮೆಸ್ಸಿ ಅವರು ವಿಶ್ವಕಪ್ನಲ್ಲಿ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 16ಕ್ಕೇರಿದೆ. ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿರುವ ಜರ್ಮನಿಯ ಮಿರಾಸ್ಲೋವ್ ಕ್ಲೋಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐದು ವಿಶ್ವಕಪ್ ಟೂರ್ನಿಗಳನ್ನು ಆಡಿದ ಎರಡನೇ ಆಟಗಾರ
ಮೆಸ್ಸಿ ಅವರು ರೊನಾಲ್ಡೊ ನಂತರ ಐದು ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಮೆಸ್ಸಿ 2006, 2014, 2018, 2022 ಹಾಗೂ 2026ರಲ್ಲಿ ಗೋಲು ಗಳಿಸಿದ್ದಾರೆ.
ಆರು ವಿಶ್ವಕಪ್ ಟೂರ್ನಿಗಳನ್ನು ಆಡಿದ ಮೊದಲ ಆಟಗಾರ
ಆರು ವಿಶ್ವಕಪ್ ಟೂರ್ನಿಗಳನ್ನು ಆಡಿದ ಮೊದಲ ಆಟಗಾರ ಮೆಸ್ಸಿ. 2006ರಿಂದ ಎಲ್ಲ ಟೂರ್ನಮೆಂಟ್ಗಳಲ್ಲಿ ಅವರು ಆಡಿದ್ದಾರೆ.
200 ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ ಮೂರನೇ ಆಟಗಾರ
ಅಲ್ಜೀರಿಯಾ ವಿರುದ್ಧ ಆಡುವ ಮೂಲಕ ಮೆಸ್ಸಿ ತನ್ನ 200ನೇ ಅಂತರ್ರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನಾಡಿದರು. ಕೇವಲ ರೊನಾಲ್ಡೊ(228)ಹಾಗೂ ಕುವೈಟ್ನ ಬಾದೆರ್-ಅಲ್ ಮುಟಾವಾ(202)ಮೆಸ್ಸಿಗಿಂತ ಹೆಚ್ಚು ಪಂದ್ಯವನ್ನಾಡಿದ್ದಾರೆ.






