GOAT Tour 2025 | ಸಚಿನ್–ಮೆಸ್ಸಿ ಭೇಟಿಯ ಅಪರೂಪದ ಕ್ಷಣ; 2011ರ ವಿಶ್ವಕಪ್ ಫೈನಲ್ ನ ಜೆರ್ಸಿ ಉಡುಗೊರೆಯಾಗಿ ನೀಡಿದ ತೆಂಡೂಲ್ಕರ್

Photo Credit : NDTV
ಮುಂಬೈ: ಕ್ರಿಕೆಟ್ ಮತ್ತು ಫುಟ್ಬಾಲ್ ಲೋಕದ ಎರಡು ಮಹಾನ್ ದಂತಕಥೆಗಳು ಒಂದೇ ವೇದಿಕೆಯಲ್ಲಿ ಭೇಟಿಯಾದ ಅಪರೂಪದ ಕ್ಷಣಕ್ಕೆ ರವಿವಾರ ಮುಂಬೈ ಸಾಕ್ಷಿಯಾಯಿತು. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡಿ, ಭಾರತ 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಜಯ ಸಾಧಿಸಿದ ಸಂದರ್ಭದಲ್ಲಿ ಧರಿಸಿದ್ದ ಐತಿಹಾಸಿಕ ಜೆರ್ಸಿಯನ್ನು ಸ್ಮರಣಿಕೆಯಾಗಿ ಉಡುಗೊರೆಯಾಗಿ ನೀಡಿದರು.
ವಿಶೇಷ ಕಾರ್ಯಕ್ರಮದ ವೇಳೆ ವೇದಿಕೆಗೆ ಆಗಮಿಸಿದ ಸಚಿನ್, ವಿಶ್ವಕಪ್ ವಿಜಯದ ನೆನಪುಗಳನ್ನು ಪ್ರತಿಬಿಂಬಿಸುವ ಜೆರ್ಸಿಯನ್ನು ಮೆಸ್ಸಿಗೆ ಹಸ್ತಾಂತರಿಸಿದರು. ಭಾರತದ ಕ್ರೀಡಾ ಇತಿಹಾಸದಲ್ಲಿ ಅನನ್ಯ ಸ್ಥಾನ ಪಡೆದಿರುವ ಆ ಕ್ಷಣದ ಸ್ಮರಣಿಕೆ ಮೆಸ್ಸಿಗೆ ನೀಡಿದ್ದು ಕ್ರೀಡಾ ಸ್ನೇಹದ ಸಂಕೇತವಾಗಿ ಮೇಳೈಸಿತು.
ಇದಕ್ಕೆ ಪ್ರತಿಯಾಗಿ, ಲಿಯೋನೆಲ್ ಮೆಸ್ಸಿ ಕೂಡ ತಮ್ಮ ವಿಶ್ವಕಪ್ ಪಯಣವನ್ನು ಪ್ರತಿನಿಧಿಸುವ ವಿಶೇಷ ಫುಟ್ಬಾಲ್ ಚೆಂಡನ್ನು ಸಚಿನ್ ಅವರಿಗೆ ಉಡುಗೊರೆಯಾಗಿ ನೀಡಿ ಗೌರವ ವ್ಯಕ್ತಪಡಿಸಿದರು.





