ದೀರ್ಘಕಾಲ ನಂ.1 ಆಲ್ರೌಂಡರ್: ಹೊಸ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜ

ರವೀಂದ್ರ ಜಡೇಜ |PTI
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 1,151 ದಿನಗಳ ಕಾಲ ನಂ.1 ಆಲ್ರೌಂಡರ್ ಆಗಿರುವ ರವೀಂದ್ರ ಜಡೇಜ ಭಾರತೀಯ ಕ್ರಿಕೆಟ್ ನಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪಿದರು.
ಸ್ಟಾರ್ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಜಡೇಜ ಅವರು ಪುರುಷರ ಐಸಿಸಿ ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಷ್ಟೊಂದು ಅವಧಿ ಯಾವೊಬ್ಬ ಆಟಗಾರನು ಅಗ್ರ ಸ್ಥಾನ ಉಳಿಸಿಕೊಂಡು ಈ ಸಾಧನೆಯನ್ನು ಮಾಡಿಲ್ಲ.
ಅಗ್ರ ಸ್ಥಾನದಲ್ಲಿ ಜಡೇಜ ಅವರ ಪ್ರಾಬಲ್ಯವು ಅವರ ಸ್ಥಿರತೆ ಮಾತ್ರವಲ್ಲ ಎಲ್ಲ ವಾತಾವರಣಗಳಲ್ಲಿ ಅವರ ಸಾಟಿಯಿಲ್ಲದ ಬಹುಮುಖ ಪ್ರತಿಭೆಗೂ ಸಾಕ್ಷಿಯಾಗಿದೆ. ಕಠಿಣ ಪಿಚ್ನಲ್ಲಿ ಅರ್ಧಶತಕ ಹಾಗೂ ಐದು ವಿಕೆಟ್ ಗೊಂಚಲು ಕಬಳಿಸುವ ಮೂಲಕ 36ರ ಹರೆಯದ ಜಡೇಜ ಭಾರತ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ.
ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಝ್ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ಜಡೇಜ ಅವರ ಅಗ್ರ ಸ್ಥಾನ ಅಬಾಧಿತವಾಗಿದೆ.
ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 116 ರನ್ ಹಾಗೂ 15 ವಿಕೆಟ್ಗಳನ್ನು ಉರುಳಿಸಿದ ನಂತರ ಮೆಹದಿ ಹಸನ್ ಅವರು ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಜೀವನಶ್ರೇಷ್ಠ ರೇಟಿಂಗ್ 327 ಪಡೆದಿರುವ ಮೆಹದಿ ಹಸನ್ ಅವರು ಜಡೇಜಗಿಂತ ಕೇವಲ 73 ಅಂಕದಿಂದ ಹಿಂದಿದ್ದಾರೆ.
ಇಂಗ್ಲೆಂಡ್ನ ಜೋ ರೂಟ್ ನಂ.1 ಬ್ಯಾಟರ್ ಆಗಿ ಮುಂದುವರಿದಿದ್ದಾರೆ. ಜಸ್ಪ್ರಿತ್ ಬುಮ್ರಾ ವಿಶ್ವದ ನಂ.1 ಬೌಲರ್ ಸ್ಥಾನಮಾನ ಉಳಿಸಿಕೊಂಡಿದ್ದಾರೆ.