2026ರ ಐಪಿಎಲ್ ನಲ್ಲಿ ಆಡ್ತಾರಾ ಎಂ. ಎಸ್. ಧೋನಿ?; ಮಹತ್ವದ ಹೇಳಿಕೆ ನೀಡಿದ CSK ಸಿಇಒ

ಎಂ. ಎಸ್. ಧೋನಿ | Photo Credit : PTI
ಹೊಸ ದಿಲ್ಲಿ: 2026ರ ಐಪಿಎಲ್ ಆವೃತ್ತಿಯಲ್ಲೂ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ದೃಢಪಡಿಸಿದ್ದು, ಆ ಮೂಲಕ ಹಿರಿಯ ಆಟಗಾರ ಧೋನಿಯ ಭವಿಷ್ಯದ ಕುರಿತ ವದಂತಿಗಳಿಗೆ ತೆರೆ ಎಳೆದಿದೆ.
“ಮುಂದಿನ ಐಪಿಎಲ್ ಆವೃತ್ತಿಗೆ ಮಹೇಂದ್ರ ಸಿಂಗ್ ಧೋನಿ ಲಭ್ಯರಿರಲಿದ್ದಾರೆ” ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ ಎಂದು Cricbuzz ವರದಿ ಮಾಡಿದೆ.
ಮುಂಬರುವ ಐಪಿಎಲ್ ಆವೃತ್ತಿಯ ಯೋಜನೆಗಳ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ಮಹೇಂದ್ರ ಸಿಂಗ್ ಧೋನಿ ನಿಕಟ ಸಮಾಲೋಚನೆಯಲ್ಲಿದ್ದಾರೆ ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ತಂಡದ ರಿಟೆನ್ಷನ್ ಹಾಗೂ ವ್ಯಾವಹಾರಿಕತೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸದಸ್ಯರಾದ ಸಿಇಒ ಕಾಶಿ ವಿಶ್ವನಾಥನ್, ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ತರಬೇತುದಾರ ಸ್ಟೀಫನ್ ಫ್ಲೆಮೆಂಗ್ ಅವರೊಂದಿಗೆ ಧೋನಿ ಪಾಲ್ಗೊಂಡಿದ್ದರು ಎಂದೂ ಈ ವರದಿಯಲ್ಲಿ ಹೇಳಲಾಗಿದೆ.





