ಮರ್ಕೆಟಾಗೆ ಶಾಕ್ ನೀಡಿದ ಮ್ಯಾಡಿಸನ್ ಸೆಮಿ ಫೈನಲ್ಗೆ

ಮ್ಯಾಡಿಸನ್ ಕೀಸ್ Photo- PTI
ನ್ಯೂಯಾರ್ಕ್: ವಿಂಬಲ್ಡನ್ ಚಾಂಪಿಯನ್ ಮರ್ಕೆಟಾ ವಂಡ್ರೌಸೋವಾರನ್ನು ಆಘಾತಕಾರಿ ಸೋಲುಣಿಸಿದ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.
ಮ್ಯಾಡಿಸನ್ ಬುಧವಾರ 1 ಗಂಟೆ, 26 ನಿಮಿಷಗಳ ಕಾಲ ಅರ್ಥರ್ ಅಶೆ ಸ್ಟೇಡಿಯಮ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮರ್ಕೆಟಾರನ್ನು 6-1, 6-4 ನೇರ ಸೆಟ್ಗಳ ಅಂತರದಿಂದ ಸೋಲಿಸಿದರು.
2017ರಲ್ಲಿ ಯು.ಎಸ್. ಓಪನ್ನಲ್ಲಿ ಫೈನಲ್ ತಲುಪಿದ್ದ ಮ್ಯಾಡಿಸನ್ ಕೀಸ್ ಶಿಸ್ತುಬದ್ಧ ಪ್ರದರ್ಶನದ ಮೂಲಕ ಗಮನ ಸೆಳೆದರು.
17ನೇ ಶ್ರೇಯಾಂಕದ ಮರ್ಕೆಟಾ ಫೈನಲ್ನಲ್ಲಿ ಸ್ಥಾನ ಪಡೆಯಲು ಮುಂದಿನ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಅರ್ಯನಾ ಸಬಲೆಂಕಾರನ್ನು ಎದುರಿಸಲಿದ್ದಾರೆ.
ಝೆಕ್ ಗಣರಾಜ್ಯದ 9ನೇ ಶ್ರೇಯಾಂಕದ ಮರ್ಕೆಟಾ ವಂಡ್ರೌಸೋವಾ ಜುಲೈನಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ ಜಯಿಸಿದ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ ಮ್ಯಾಡಿಸನ್ ವಿರುದ್ಧದ ಪಂದ್ಯದಲ್ಲಿ 9 ಬ್ರೇಕ್ ಪಾಯಿಂಟ್ಸ್ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿ ನಿರಾಸೆಗೊಳಿಸಿದರು.







