ಮಹ್ಮೂದುಲ್ ಹಸನ್ ಜೀವನಶ್ರೇಷ್ಠ ಪ್ರದರ್ಶನ

ಮಹ್ಮುದುಲ್ ಹಸನ್ |Photo Credit : X
ಸಿಲ್ಹೆಟ್, ನ.12: ಆರಂಭಿಕ ಆಟಗಾರ ಮಹ್ಮೂದುಲ್ ಹಸನ್ ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 169, 283 ಎಸೆತ, 14 ಬೌಂಡರಿ, 4 ಸಿಕ್ಸರ್)ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಐರ್ಲ್ಯಾಂಡ್ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.
2ನೇ ದಿನದಾಟವಾದ ಬುಧವಾರ ಐರ್ಲ್ಯಾಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 286 ರನ್ ಗೆ ನಿಯಂತ್ರಿಸಿದ ಬಾಂಗ್ಲಾದೇಶ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 1 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದ್ದು, 52 ರನ್ ಮುನ್ನಡೆಯಲ್ಲಿದೆ.
ಮಹ್ಮೂದುಲ್ ಹಸನ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಐರ್ಲ್ಯಾಂಡ್ ಬೌಲರ್ ಗಳು ಪರದಾಟ ನಡೆಸಿದರು. ಮಹ್ಮೂದುಲ್ ಅವರು ಶಾದ್ಮನ್ ಇಸ್ಲಾಂ(80 ರನ್, 104 ಎಸೆತ, 9 ಬೌಂಡರಿ,1 ಸಿಕ್ಸರ್)ಅವರೊಂದಿಗೆ ಮೊದಲ ವಿಕೆಟ್ ಗೆ 168 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮಹ್ಮೂದುಲ್ ಅವರು ಮೂಮಿನುಲ್ ಹಕ್(ಔಟಾಗದೆ 80, 124 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರೊಂದಿಗೆ 2ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 170 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ್ದಾರೆ.
8 ವಿಕೆಟ್ ಗಳ ನಷ್ಟಕ್ಕೆ 270 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಐರ್ಲ್ಯಾಂಡ್ ತಂಡವು ಬುಧವಾರ ಮೊದಲ 13 ನಿಮಿಷದಲ್ಲಿ ಉಳಿದಿರುವ ಎರಡೂ ವಿಕೆಟ್ ಗಳನ್ನು ಕಳೆದುಕೊಂಡು 286 ರನ್ ಗೆ ಆಲೌಟಾಯಿತು. ಪೌಲ್ ಸ್ಟಿರ್ಲಿಂಗ್(60 ರನ್, 76 ಎಸೆತ, 9 ಬೌಂಡರಿ) ಹಾಗೂ ಕೇಡ್ ಕಾರ್ಮೈಕಲ್(59 ರನ್, 129 ಎಸೆತ, 7 ಬೌಂಡರಿ) ಅರ್ಧಶತಕ ಗಳಿಸಿದರು.
ಐರ್ಲ್ಯಾಂಡ್ ಬ್ಯಾಟರ್ ಗಳು ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಬಾಂಗ್ಲಾದೇಶ ಬೌಲರ್ ಗಳು ಉತ್ತಮ ಬ್ಯಾಟಿಂಗ್ ಪಿಚ್ನಲ್ಲಿ ಬೌಲಿಂಗ್ ನಲ್ಲಿ ಮಿಂಚಿದರು. ಹಸನ್ ಮಹಮೂದ್(2-42), ಹಸನ್ ಮುರಾದ್(2-47) ಹಾಗೂ ತೈಜುಲ್ ಇಸ್ಲಾಂ (2-78) ತಲಾ 2 ವಿಕೆಟ್ ಗಳನ್ನು ಪಡೆದರು. ಮೆಹಿದಿ ಹಸನ್ ಮಿರಾಝ್(3-50) ಯಶಸ್ವಿ ಪ್ರದರ್ಶನ ನೀಡಿದರು. ಆದರೆ ಬಾಂಗ್ಲಾದೇಶದ ಫೀಲ್ಡಿಂಗ್ ನೀರಸವಾಗಿದ್ದು, ಮೊದಲ ದಿನ ಐದು ಕ್ಯಾಚ್ಗಳನ್ನು ಕೈಚೆಲ್ಲಿದೆ.







