ಮಲೇಶ್ಯ ಮಾಸ್ಟರ್ಸ್: ಫೈನಲ್ ನಲ್ಲಿ ಎಡವಿದ ಕಿಡಂಬಿ ಶ್ರೀಕಾಂತ್

ಕಿಡಂಬಿ ಶ್ರೀಕಾಂತ್ | PC : NDTV
ಕೌಲಾಲಂಪುರ: ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಚೀನಾದ ವಿಶ್ವದ ನಂ.4ನೇ ಆಟಗಾರ ಲಿ ಶಿ ಫೆಂಗ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋತಿರುವ ಕಿಡಂಬಿ ಶ್ರೀಕಾಂತ್ ಮಲೇಶ್ಯ ಮಾಸ್ಟರ್ಸ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.
32ರ ಹರೆಯದ ಶ್ರೀಕಾಂತ್ ದೀರ್ಘ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಹಲವು ಅವಕಾಶಗಳಿಂದ ವಂಚಿತರಾಗಿದ್ದರು. ಇದೀಗ ಆರು ವರ್ಷಗಳ ನಂತರ ಮೊದಲ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಗೆ ತಲುಪಿದ್ದ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದರು.
ಆದರೆ, ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ 2ನೇ ಶ್ರೇಯಾಂಕದ ಲೀ ವಿರುದ್ಧ ಪರದಾಟ ನಡೆಸಿದ್ದು, 36 ನಿಮಿಷಗಳ ಹೋರಾಟದಲ್ಲಿ 11-21, 9-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಫೈನಲ್ನಲ್ಲಿ ಸೋತ ಹೊರತಾಗಿಯೂ ಶ್ರೀಕಾಂತ್ ಸ್ಫೂರ್ತಿಯುತ ಪ್ರದರ್ಶನದಿಂದ ಗಮನ ಸೆಳೆದರು. ಈ ತಿಂಗಳಾರಂಭದಲ್ಲಿ 82ನೇ ಸ್ಥಾನಕ್ಕೆ ಕುಸಿದಿರುವ ಶ್ರೀಕಾಂತ್, 2019ರಲ್ಲಿ ಇಂಡಿಯಾ ಓಪನ್ ಟೂರ್ನಿಯಲ್ಲಿ ಕೊನೆಯ ಬಾರಿ ಫೈನಲ್ಗೆ ತಲುಪಿದ್ದರು. ಆಗ ರನ್ನರ್ಸ್ ಅಪ್ಗೆ ತೃಪ್ತಿಪಟ್ಟಿದ್ದರು. 2021ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಶ್ರೀಕಾಂತ್ ಬೆಳ್ಳಿ ಪದಕ ಜಯಿಸಿದ್ದರು.







