ಮಲೇಶ್ಯ ಮಾಸ್ಟರ್ಸ್: ಶ್ರೀಕಾಂತ್ ಕ್ವಾರ್ಟರ್ ಫೈನಲ್ ಗೆ
ಆಯುಷ್ ಶೆಟ್ಟಿ, ಕರುಣಾಕರನ್ ಗೆ ಸೋಲು

ಕಿಡಂಬಿ ಶ್ರೀಕಾಂತ್ | Photo: PTI
ಕೌಲಾಲಂಪುರ: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ತಲುಪಿದ್ದಾರೆ.
ಗುರುವಾರ ಕೇವಲ 59 ನಿಮಿಷಗಳಲ್ಲಿ ಕೊನೆಗೊಂಡಿರುವ ತನ್ನ 2ನೇ ಸುತ್ತಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಐರ್ಲ್ಯಾಂಡ್ನ ಗುಯೆನ್ ರನ್ನು 23-21, 21-17 ಗೇಮ್ ಗಳ ಅಂತರದಿಂದ ಮಣಿಸಿದರು.
ದೀರ್ಘ ಸಮಯದಿಂದ ಕಳಪೆ ಫಾರ್ಮ್ ನಲ್ಲಿರುವ ಕಾರಣ ವಿಶ್ವ ರ್ಯಾಂಕಿಂಗ್ ನಲ್ಲಿ ಸದ್ಯ 65ನೇ ಸ್ಥಾನದಲ್ಲಿರುವ ಶ್ರೀಕಾಂತ್ ಅಂತಿಮ-8ರ ಘಟ್ಟದಲ್ಲಿ ಫ್ರಾನ್ಸ್ ಆಟಗಾರ ಟೋಮಾ ಜೂನಿಯರ್ ಪೊಪೋವ್ ರನ್ನು ಎದುರಿಸಲಿದ್ದಾರೆ.
ಭಾರತದ ಇನ್ನೋರ್ವ ಆಟಗಾರ ಆಯುಷ್ ಶೆಟ್ಟಿ ಅವರನ್ನು 21-13, 21-17 ನೇರ ಗೇಮ್ ಗಳ ಅಂತರದಿಂದ ಮಣಿಸಿದ ಪೋಪೊವ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಸತೀಶ್ ಕರುಣಾಕರನ್ ಅವರು ಟಾಮ್ ಅವರ ಸಹೋದರ ಹಾಗೂ ಡಬಲ್ಸ್ ಪಾರ್ಟ್ನರ್ ಕ್ರಿಸ್ಟೊ ಪೊಪೋವ್ ಎದುರು 14-21, 16-21 ನೇರ ಸೆಟ್ಗಳಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಫ್ರಾನ್ಸ್ನ ಲಿಯ ಪಾಲೆರ್ಮೊ ಹಾಗೂ ಜುಲಿಯನ್ ಮೈಯೊ ವಿರುದ್ಧ 21-17, 18-21, 21-15 ಗೇಮ್ ಗಳ ಅಂತರದಿಂದ ವೀರೋಚಿತ ಗೆಲುವು ದಾಖಲಿಸಿರುವ ತನಿಷಾ ಕ್ರಾಸ್ಟೊ ಹಾಗೂ ಧ್ರುವ್ ಕಪಿಲಾ ಕ್ವಾರ್ಟರ್ ಫೈನಲ್ ಗೆ ತಲುಪಿದ್ದಾರೆ.
ಕ್ರಾಸ್ಟೊ ಹಾಗೂ ಕಪಿಲಾ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಝೆನ್ ಬಾಂಗ್ ಹಾಗೂ ವೀ ಯಾ ಕ್ಸಿನ್ ರನ್ನು ಎದುರಿಸಲಿದ್ದಾರೆ.







