ಮಲೇಶ್ಯ ಓಪನ್ ಫೈನಲ್: ಎರಡನೇ ಸ್ಥಾನ ಪಡೆದ ಸಾತ್ವಿಕ್-ಚಿರಾಗ್

ಸಾತ್ವಿಕ್-ಚಿರಾಗ್ | Photo: X
ಕೌಲಾಲಂಪುರ : ಮಲೇಶ್ಯ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್ ನಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧ ವೀರೋಚಿತ ಸೋಲುಂಡಿರುವ ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ಸಾತ್ವಿಕ್ ಹಾಗೂ ಚಿರಾಗ್ ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಜೋಡಿ ಕೆಂಗ್ ಹಾಗೂ ಚಾಂಗ್ ವಿರುದ್ಧ 21-9, 18-21, 17-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ಮಲೇಶ್ಯ ಓಪನ್ ನಲ್ಲಿ ಕನಸಿನ ಓಟಕ್ಕೆ ತೆರೆ ಬಿದ್ದಿದೆ.
ಸಾತ್ವಿಕ್ ಹಾಗೂ ಚಿರಾಗ್ ಮೊದಲ ಗೇಮ್ ಅನ್ನು 21-9 ಅಂತರದಿಂದ ಗೆದ್ದುಕೊಂಡಿದ್ದರು. ಆದರೆ ಮುಂದಿನ ಎರಡು ಗೇಮ್ ಗಳಲ್ಲಿ 18-21 ಹಾಗೂ 17-21 ಅಂತರದಿಂದ ಸೋಲನುಭವಿಸಿದರು.
ಕಳೆದ ವರ್ಷದ ಜೂನ್ ನಲ್ಲಿ ಇಂಡೋನೇಶ್ಯ ಓಪನ್ ಜಯಿಸುವ ಮೂಲಕ ಚೊಚ್ಚಲ ಸೂಪರ್-1000 ಪ್ರಶಸ್ತಿ ಜಯಿಸಿದ್ದ ಸಾತ್ವಿಕ್ ಹಾಗೂ ಚಿರಾಗ್ ಫೈನಲ್ ನಲ್ಲಿ ಎಡವಿದರೂ ಮತ್ತೊಂದು ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದರು.
ಸಾತ್ವಿಕ್ ಹಾಗೂ ಚಿರಾಗ್ ಚೀನಾದ ಲಿಯಾಂಗ್ ಹಾಗೂ ವಾಂಗ್ ವಿರುದ್ಧ ಇಂದು ನಾಲ್ಕನೇ ಬಾರಿ ಸೋತಿದ್ದಾರೆ. 2023ರಲ್ಲಿ ಮೂರು ಬಾರಿ ಸೋಲನುಭವಿಸಿದ್ದರು. ಕಳೆದ ವರ್ಷ ಕೊರಿಯಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಮಾತ್ರ ಸಾತ್ವಿಕ್ ಹಾಗೂ ಚಿರಾಗ್ ಈ ಜೋಡಿಯ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಜಯಿಸಿತ್ತು.
ಸಾತ್ವಿಕ್ ಹಾಗೂ ಚಿರಾಗ್ ಮಂಗಳವಾರ ಹೊಸದಿಲ್ಲಿಯಲ್ಲಿ ಆರಂಭವಾಗಲಿರುವ ಇಂಡಿಯಾ ಓಪನ್ ಸೂಪರ್ 750 ಟೂರ್ನಮೆಂಟ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಮಲೇಶ್ಯ ಓಪನ್ ಟೂರ್ನಮೆಂಟ್ ನಲ್ಲಿ ನಾವು ಆಡಿರುವ ರೀತಿಯು ನಮಗೆ ಖುಷಿ ಕೊಟ್ಟಿದೆ.ನಾವು ಸಾಕಷ್ಟು ಒತ್ತಡದಲ್ಲಿ ಆಡಿದೆವು. ನಾವು ಕ್ಷುಲ್ಲಕ ತಪ್ಪೆಸಗಿದವು. ಎದುರಾಳಿ ಜೋಡಿ ನಮ್ಮ ಮೇಲೆ ಒತ್ತಡ ಹೇರಿತು. ನಾವು ಮುಂದಿನ ಬಾರಿ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸವಿದೆ ಎಂದು ಪಂದ್ಯದ ನಂತರ ಸಾತ್ವಿಕ್ ಪ್ರತಿಕ್ರಿಯಿಸಿದರು.







