ಟೆಸ್ಟ್ ಕ್ರಿಕೆಟಿನ ಚೊಚ್ಚಲ ಪಂದ್ಯದ ಮೊದಲ ಓವರ್ನಲ್ಲಿ ವಿಕೆಟ್ ಪಡೆದ ಎಂಟನೇ ಬೌಲರ್ ಮಾನವ್ ಸುಥರ್

Photo : x@BCCI
ಹೊಸದಿಲ್ಲಿ, ಜೂ.7: ಭಾರತ ತಂಡದ ಯುವ ಎಡಗೈ ಸ್ಪಿನ್ನರ್ ಮಾನವ್ ಸುಥರ್ ಅವರು ಅಫ್ಘಾನಿಸ್ತಾನ ತಂಡದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನವಾದ ರವಿವಾರ ಅತ್ಯಂತ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.
ಎರಡನೇ ದಿನದಾಟದ ಟೀ ವಿರಾಮಕ್ಕೆ ಮೊದಲು ನಾಯಕ ಶುಭಮನ್ ಗಿಲ್, ಸುಥರ್ಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು. 23ರ ಹರೆಯದ ಸುಥರ್ ಹೆಚ್ಚು ಸಮಯ ವ್ಯರ್ಥ ಮಾಡದೆ ತನ್ನ ಟೆಸ್ಟ್ ವೃತ್ತಿಜೀವನದ ಮೊದಲ ಓವರ್ನ ನಾಲ್ಕನೇ ಎಸೆತದಲ್ಲೇ ವಿಕೆಟ್ ಉರುಳಿಸಿದರು. ಸ್ವೀಪ್ ಮಾಡಲು ಯತ್ನಿಸಿದ ಅಬ್ದುಲ್ ಮಲಿಕ್ ಅವರು ಮುಹಮ್ಮದ್ ಸಿರಾಜ್ ಅವರಿಗೆ ಕ್ಯಾಚ್ ನೀಡಿದರು.
ತನ್ನ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಸುಥರ್ ಕುಣಿದು ಕುಪ್ಪಳಿಸಿದರು. ಸಹ ಆಟಗಾರರು ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.
ಟೆಸ್ಟ್ ಪಂದ್ಯದಲ್ಲಿ ತಾನಾಡಿದ ಮೊದಲ ಓವರ್ನಲ್ಲಿ ವಿಕೆಟ್ ಪಡೆದ ಸುಥರ್ ಈ ಸಾಧನೆ ಮಾಡಿದ ಭಾರತದ ಎಂಟನೇ ಆಟಗಾರ ಎನಿಸಿಕೊಂಡರು. ಸುಮಾರು ಎಂಟು ದಶಕಗಳ ಹಿಂದೆ ರಚಿಸಲ್ಪಟ್ಟ ಪಟ್ಟಿಗೆ ಸೇರಿದರು. ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಕೇವಲ ಏಳು ಬೌಲರ್ಗಳು ಈ ಸಾಧನೆ ಮಾಡಿದ್ದಾರೆ.
ವಿಶೇಷ ಕ್ಲಬ್ನಲ್ಲಿ ಮೊಂಟು ಬ್ಯಾನರ್ಜಿ(ವೆಸ್ಟ್ಇಂಡೀಸ್ ವಿರುದ್ಧ್ದ, 1948), ಮನೋಹರ್ ಹಾರ್ಡಿಕರ್(ವೆಸ್ಟ್ಇಂಡೀಸ್ ವಿರುದ್ದ, 1958), ವಾಮನ್ ಕುಮಾರ್(ಪಾಕಿಸ್ತಾನದ ವಿರುದ್ಧ, 1961), ಚೇತನ್ ಶರ್ಮಾ(ಪಾಕಿಸ್ತಾನದ ವಿರುದ್ಧ, 1984), ಡಬ್ಲ್ಯುವಿ ರಮನ್(ವೆಸ್ಟ್ಇಂಡೀಸ್ ವಿರುದ್ಧ, 1988), ನಿಲೇಶ್ ಕುಲಕರ್ಣಿ(ಶ್ರೀಲಂಕಾ ವಿರುದ್ಧ, 1997) ಹಾಗೂ ಟಿನು ಯೋಹಾನನ್(ಇಂಗ್ಲೆಂಡ್ ವಿರುದ್ಧ 2001)ಅವರಿದ್ದಾರೆ.
ಯೋಹಾನನ್ 2001ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ ಪಂದ್ಯದ ಮೊದಲ ಓವರ್ನಲ್ಲಿ ಮಾರ್ಕಸ್ ಟ್ರೆಸ್ಕೊಥಿಕ್ರನ್ನು ಔಟ್ ಮಾಡಿದ ನಂತರ ಯಾವೊಬ್ಬ ಭಾರತೀಯನು 25 ವರ್ಷಗಳಿಂದ ಈ ಮೈಲಿಗಲ್ಲು ತಲುಪಿಲ್ಲ. ಸುಥರ್ ಇದೀಗ ವಿಶೇಷ ಸಾಧನೆ ಮಾಡಿದ್ದಾರೆ.
ಆಲ್ರೌಂಡರ್ ಹರ್ಷ ದುಬೆಯವರನ್ನು ಹಿಂದಿಕ್ಕಿ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಸುಥರ್, ಟೀಮ್ ಮ್ಯಾನೇಜ್ಮೆಂಟ್ ತನ್ನ ಮೇಲಿಟ್ಟಿ ಭರವಸೆಗೆ ನ್ಯಾಯ ಒದಗಿಸಿದರು. ಪಂದ್ಯಕ್ಕಿಂತ ಮೊದಲು ಹಿರಿಯ ಸ್ಪಿನ್ನರ್ ಕುಲದೀಪ್ ಯಾದವ್ರಿಂದ ಟೆಸ್ಟ್ ಕ್ಯಾಪ್ ನಂ.319 ಅನ್ನು ಸ್ವೀಕರಿಸಿದರು. 2021ರ ನಂತರ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟ ಮೊದಲ ಸ್ಪಿನ್ನರ್ ಬೌಲರ್ ಎನಿಸಿಕೊಂಡರು. ಅಕ್ಷರ್ ಪಟೇಲ್ 2021ರಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ದರು.






