ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಮಣಿಕಾ ಬಾತ್ರಾ; ಬ್ಯುನಸ್ ಐರಿಸ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನ

ಮಣಿಕಾ ಬಾತ್ರಾ | PTI
ಮುಂಬೈ, ಜು.21: ದೋಹಾಗೆ ವಿಮಾನ ಹಾರಾಟ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಅವರು ಬ್ಯುನಸ್ ಐರಿಸ್ ನ 2025ರ ಆವೃತ್ತಿಯ ಡಬ್ಲ್ಯುಟಿಟಿ ಕಂಟೆಂಡರ್ ಏರ್ಸ್ ನಲ್ಲಿ ಭಾಗವಹಿಸುವುದು ಅನಿಶ್ಚಿತವಾಗಿದೆ.
‘‘ ಮುಂಬೈನಲ್ಲಿರುವ ಖತರ್ ಏರ್ ವೇಸ್ ಸಿಬ್ಬಂದಿ ಈ ವಿಚಾರದಲ್ಲಿ ನನಗೆ ಸ್ವಲ್ಪವೂ ಸಹಾಯ ಮಾಡುತ್ತಿಲ್ಲ’’ ಎಂದು 2020ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ ಬಾತ್ರಾ ಅವರು ಎಕ್ಸ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.
‘‘ ಇದೀಗ ನಾನು ಪ್ರಧಾನಮಂತ್ರಿ ಕಚೇರಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಕೇಂದ್ರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯರಿಂದ ನೆರವನ್ನು ನಿರೀಕ್ಷಿಸುತ್ತಿರುವೆ’’ ಎಂದು ಬಾತ್ರಾ ಹೇಳಿದ್ದಾರೆ.
‘‘ತುರ್ತು-ತಕ್ಷಣದ ಸಹಾಯದ ಅಗತ್ಯವಿದೆ. ನನ್ನ ವಿಮಾನ ಕ್ಯೂಆರ್557(ಮುಂಬೈನಿಂದ ದೋಹಾ)ಈಗಷ್ಟೇ ತನ್ನ ಹಾರಾಟವನ್ನು ರದ್ದುಪಡಿಸಿದೆ. ನನಗೆ ದೋಹಾದಿಂದ ಅರ್ಜೆಂಟೀನಕ್ಕೆ ಸಂಪರ್ಕ ವಿಮಾನ ಇತ್ತು. ಅಲ್ಲಿ ನಾನು ನಾಳೆಯಿಂದ ಆರಂಭವಾಗಲಿರುವ ಅಂತರರಾಷ್ಟ್ರೀಯ ಟೂರ್ನಮೆಂಟ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದೇನೆ’’ ಎಂದು ಬಾತ್ರಾ ಎಕ್ಸ್ ನಲ್ಲಿ ಬರೆದಿದ್ದಾರೆ.
‘‘ಮುಂಬೈನಲ್ಲಿರುವ ಖತರ್ ಏರ್ ವೇಸ್ ಸಿಬ್ಬಂದಿ ನನಗೆ ಯಾವುದೇ ನೆರವು ನೀಡುತ್ತಿಲ್ಲ. ಪರಿಸ್ಥಿತಿಯ ಅರಿವಿದ್ದರೂ ಅವರು ನನ್ನ ಎಲ್ಲ ತುರ್ತು ಮನವಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಮುಂದಿನ ಲಭ್ಯವಿರುವ ವಿಮಾನದಲ್ಲಿ ಮತ್ತೆ ಟಿಕೆಟ್ ಬುಕ್ ಮಾಡಲು ತುರ್ತಾಗಿ ಮಧ್ಯಪ್ರವೇಶಿಸಲು ವಿನಂಸುತ್ತೇನೆ. ದಯವಿಟ್ಟು ಸಹಾಯ ಮಾಡಿ’’ ಎಂದು ಬಾತ್ರಾ ಎಕ್ಸ್ ನಲ್ಲಿ ಬರೆದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವಳಿ ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಮಣಿಕಾ ಬಾತ್ರಾ ಎಲ್ಲರ ಗಮನ ಸೆಳೆದಿದ್ದರು. ಏಶ್ಯನ್ ಗೇಮ್ಸ್, ಏಶ್ಯನ್ ಚಾಂಪಿಯನ್ ಶಿಪ್ ಹಾಗೂ ಏಶ್ಯನ್ ಕಪ್ ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಬಾತ್ರಾ ಅವರು ಏಶ್ಯನ್ ಕಪ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು. 2020ರಲ್ಲಿ ಬಾತ್ರಾಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಮಣಿಕಾ ಬಾತ್ರಾ ಅವರು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಂತಿಮ-16ರ ಸುತ್ತು ತಲುಪಿದ್ದರು. ಒಲಿಂಪಿಕ್ಸ್ ನ ಸಿಂಗಲ್ಸ್ ಸ್ಪರ್ಧೆಯಲ್ಲಿ ಈ ಹಂತ ತಲುಪಿದ್ದ ಭಾರತದ ಏಕೈಕ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದರು.







