ಭಾರತೀಯ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಮನೋಲಾ ಮಾರ್ಕ್ವೆಝ್ ನೇಮಕ

ಮನೋಲಾ ಮಾರ್ಕ್ವೆಝ್ | Credit: X/@AIFF
ಹೊಸದಿಲ್ಲಿ: ವಜಾಗೊಂಡಿರುವ ಐಗರ್ ಸ್ಟಿಮ್ಯಾಕ್ ಬದಲಿಗೆ ಸ್ಪೇನ್ನ ಮನೋಲಾ ಮಾರ್ಕ್ವೆಝ್ ಅವರನ್ನು ಭಾರತೀಯ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಶನಿವಾರ ನೇಮಿಸಲಾಗಿದೆ. ಅವರೀಗ ಇಂಡಿಯನ್ ಸೂಪರ್ ಲೀಗ್ನಲ್ಲಿ ಎಫ್ಸಿ ಗೋವಾ ತಂಡದ ಉಸ್ತುವಾರಿಯಾಗಿದ್ದಾರೆ.
ಹೊಸದಿಲ್ಲಿಯಲ್ಲಿಂದು ಸಭೆ ಸೇರಿದ್ದ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಕಾರ್ಯಕಾರಿಣಿ ಸಮಿತಿಯು ಮಾರ್ಕೆಝ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಿತು. ಆದರೆ, ಮಾರ್ಕ್ವೆಝ್ ಅವರ ಸೇವಾವಧಿಯ ಕುರಿತು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ.
55 ವರ್ಷದ ಮಾರ್ಕೆಝ್ ಸದ್ಯ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ನಲ್ಲಿ ಎಫ್ಸಿ ಗೋವಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕೂ ಮುನ್ನ, 2026ರ ಫೀಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತೀಯ ಫುಟ್ಬಾಲ್ ತಂಡವು ಮೂರನೆ ಹಂತ ಪ್ರವೇಶಿಸಲು ವಿಫಲವಾದ ಹಿನ್ನೆಲೆಯಲ್ಲಿ ಜೂನ್ 17ರಂದು ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿದ್ದ ಐಗರ್ ಸ್ಟಿಮ್ಯಾಕ್ ಅವರನ್ನು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ವಜಾಗೊಳಿಸಿತ್ತು.





